ಯೋಜನೆಗಳನ್ನು ಶೀಘ್ರವಾಗಿ ಫಲಾನುಭವಿಗಳಿಗೆ ತಲುಪಿಸಿ: ಆರ್.ಗಿರೀಶ್
ಹಾಸನ.ಅ.22.(ಕರ್ನಾಟಕ ವಾರ್ತೆ):- ಪರಿಶಿಷ್ಟ ಜಾತಿ ಹಾಗೂ ಪಂಗಡ ಶ್ರೇಯೋಭಿವೃದ್ಧಿಗೆ ರೂಪಿಸುವ ಯೋಜನೆಗಳು ಶೀಘ್ರವಾಗಿ ಫಲಾನುಭವಿಗಳಿಗೆ ದೊರಕುವಂತೆ ಕ್ರಮವಹಿಸಿ ಎಂದು ಜಿಲ್ಲಾಧಿಕಾರಿ ಆರ್. ಗಿರೀಶ್ ತಿಳಿಸಿದ್ದಾರೆ.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡಿದ ಅವರು ಈಗಾಗಲೇ 18 ಇಲಾಖೆಗಳಿಗೆ ಮೊದಲನೇ ಕಂತಿನ ಹಣ ಬಿಡುಗಡೆಯಾಗಿದ್ದು, ಎರಡನೇ ಕಂತಿಗೆ ಮನವಿ ಸಲ್ಲಿಸಿ ಅನುದಾನಗಳನ್ನು ಸಮರ್ಪಕವಾಗಿ ಫಲಾನುಭವಿಗಳಿಗೆ ಹಂಚಿಕೆ ಮಾಡಿ ಎಂದು ಹೇಳಿದರು.
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಶ್ರೇಯೋಭಿವೃದ್ಧಿಗೆ ಒದಗಿಸುವ ಅನುದಾನವನ್ನು ಸಮರ್ಪಕವಾಗಿ ವೆಚ್ಚ ಮಾಡದೆ ಇರುವುದು ಕಾನೂನಿನ ಪ್ರಕಾರ ಅಪರಾಧವಾಗಿದ್ದು, ಅಧಿಕಾರಿಗಳು ಸೂಕ್ಷ್ಮತೆ ಅರಿತು ಅನುಷ್ಠಾನ ಕಾರ್ಯ ನಡೆಸಬೇಕು ಎಂದರು.
ಫಲಾನುಭವಿಗಳಿಗೆ ಯೋಜನೆಗಳ ಬಗ್ಗೆ ಅರಿವು ನೀಡಿ, ಸೌಲಭ್ಯ ಪಡೆಯುವಂತೆ ಪ್ರೇರೇಪಿಸುವ ನಿಟ್ಟಿನಲ್ಲಿ ಸಮಾಜ ಕಲ್ಯಾಣ ಇಲಾಖೆ ಹಾಗೂ ಇತರೆ ಇಲಾಖಾ ಅಧಿಕಾರಿಗಳು ಹೆಚ್ಚು ಗಮನಹರಿಸಿ ಕಾರ್ಯ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಹೇಳಿದರು.
ವಿವಿಧ ಸ್ತ್ರೀ-ಶಕ್ತಿ, ಸ್ವ-ಸಹಾಯ ಸಂಘಗಳಿಗೆ ಮಾಹಿತಿ ನೀಡಿ, ಪ್ರೋತ್ಸಾಹಧನವನ್ನು ಒದಗಿಸಿ, ಅವುಗಳಿಗೆ ಇಲಾಖೆಗಳಲ್ಲಿ ಬಾಕಿ ಉಳಿದಿರುವ ಅನುದಾನಗಳನ್ನು ಆದಷ್ಟು ಬೇಗ ಕ್ರಿಯಾ ಯೋಜನೆಗೆ ತಕ್ಕಂತೆ ವೆಚ್ಚ ಮಾಡಬೇಕು. ಆರ್ಥಿಕ ಬೆಳವಣಿಗೆಗೆ ವಿವಿಧ ಯೋಜನೆಗಳನ್ನು ಸಿದ್ಧಪಡಿಸಿ, ಜೊತೆಗೆ ಸಂಘಗಳ ಮೂಲಕ ವಿವಿಧ ಬಗೆಯ ಉತ್ಪನ್ನಗಳನ್ನು ತಯಾರಿಸಿ ಅದರ ಮಾರಾಟಕ್ಕೆ ಸೂಕ್ತ ವ್ಯವಸ್ಥೆ ಮಾಡಬೇಕು ಹಾಗೂ ಈ ಬಗ್ಗೆ ಹೆಚ್ಚು ಪ್ರಚಾರಗಳನ್ನು ಮಾಡಬೇಕು ಎಂದು ಆರ್. ಗಿರೀಶ್ ತಿಳಿಸಿದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ನೀಡಲಾಗುವ ಜನನಿ ಸುರಕ್ಷಾ ಯೋಜನೆಯ ಸೌಲಭ್ಯವನ್ನು ಎಲ್ಲಾ ಫಲಾನುಭವಿಗಳಿಗೆ ಕಡ್ಡಾಯವಾಗಿ ತಲುಪಿಸುವ ಕ್ರಮವಹಿಸಿ ಎಂದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ.ಎ. ಪರಮೇಶ್ ಮಾತನಾಡಿ ಸ್ತ್ರೀ ಶಕ್ತಿ ಸ್ವ ಸಹಾಯ ಸಂಘಗಳು ಉತ್ಪಾದನೆ ಮಾಡುವ ವಸ್ತುಗಳಿಗೆ ಪ್ರತಿ ತಾಲ್ಲೂಕಿನಲ್ಲಿಯೂ ವ್ಯವಸ್ಥಿತ ಮಾರುಕಟ್ಟೆ ಒದಗಿಸುವ ಅಗತ್ಯವಿದ್ದು, ಕಾಲಕಾಲಕ್ಕೆ ಮಾರಾಟ ಮೇಳ ಆಯೋಜಿಸಬೇಕು ಎಂದು ಹೇಳಿದರಲ್ಲದೆ, ಕೆಲವು ಯೋಜನೆಗಳು ಕ್ರಿಯಾ ಯೋಜನೆ ಅನುಮೋದನೆಗೆ ಬಾಕಿ ಇರುವುದರಿಂದ ಅನುಷ್ಠಾನ ವಿಳಂಬವಾಗಿದೆ ಎಂದರು.
ಜಿಲ್ಲಾ ಪಂಚಾಯ್ತಿ ಅಧೀನದ ಎಲ್ಲಾ ಇಲಾಖೆಗಳು ವಿಳಂಬ ಮಾಡದೆ ಶೇ. 100 ರಷ್ಟು ಅನುಷ್ಠಾನ ಪ್ರಗತಿ ತೋರಿಸಬೇಕು. ಶಾಸಕರಿಂದ ಪಟ್ಟಿಗಳನ್ನು ಅನುಮೋದನೆ ಮಾಡಿಸಿಕೊಂಡು ಯೋಜನೆ ಜಾರಿಗೊಳಿಸಿ ಎಂದು ಹೇಳಿದರು.
ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾ ಅಧಿಕಾರಿ ನಾಗರಾಜು, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರಾದ ಶ್ರೀಧರ್, ಜಂಟಿ ಕೃಷಿ ನಿರ್ದೇಶಕರಾದ ರವಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ|| ಸತೀಶ್, ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರಾದ ಪ್ರಕಾಶ್ ಹಾಗೂ ಮತ್ತಿತರರು ಸಭೆಯಲ್ಲಿ ಹಾಜರಿದ್ದರು.
*******
0 Comments