ಹಾಸನಾಂಬ ಅದ್ದೂರಿ ದರ್ಶನೋತ್ಸವಕ್ಕೆ ಸಕಲಸಿದ್ಧತೆ



ಹಾಸನ: ಜಿಲ್ಲೆಯ ಅಧಿದೇವತೆ ಹಾಸನಾಂಬ ಜಾತ್ರಾ ಮಹೋತ್ಸವ ನವೆಂಬರ್ 2 ರಿಂದ 15 ರವರೆಗೆ ಜರುಗಲಿದ್ದು ಜಿಲ್ಲಾಡಳಿತದಿಂದ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಹಾಸನಾಂಬ ದೇವಸ್ಥಾನ ಆಡಳಿತಾಧಿಕಾರಿ ಹಾಗೂ ಉಪ ವಿಭಾಗಾಧಿಕಾರಿ ಮಾರುತಿ ತಿಳಿಸಿದರು .

ಜಿಲ್ಲಾಧಿಕಾರಿ ಕಚೇರಿಯಲ್ಲಿ ಸುದ್ದಿಗಾರರಿಗೆ ಮಾಹಿತಿ ನೀಡಿದ ಅವರು ನವಂಬರ್ ೨ ರಂದು ಮಧ್ಯಾಹ್ನ 12 ಗಂಟೆಗೆ ಧಾರ್ಮಿಕ ವಿಧಿ ವಿಧಾನದೊಂದಿಗೆ ಪೂಜೆ ಕೈಂಕರ್ಯ ಬಳಿಕ ದೇವಾಲಯದ ಗರ್ಭಗುಡಿ ಬಾಗಿಲನ್ನು ತೆರೆಯಲಾಗುವುದು,  ನವಂಬರ್ ಎರಡು ಹಾಗೂ ಬಾಗಿಲು ಮುಚ್ಚುವ ದಿನಾಂಕ ಸಾರ್ವಜನಿಕರಿಗೆ ದರ್ಶನ ಇರುವುದಿಲ್ಲ ಎಂದು ಹೇಳಿದರು .

ಈ ಬಾರಿಯ ಹಾಸನಾಂಬ ದರ್ಶನೋತ್ಸವಕ್ಕೆ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಚಾಲನೆ ನೀಡಲಿದ್ದಾರೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್ ರಾಜಣ್ಣ , ಸೇರಿದಂತೆ ಸ್ಥಳೀಯ ಶಾಸಕ ಸ್ವರೂಪ್ ಪ್ರಕಾಶ್ ಹಾಗೂ ಅನೇಕ ಗಣ್ಯರು ಭಾಗವಹಿಸಲಿದ್ದಾರೆ ಎಂದರು .

ಈ ಬಾರಿಯ ಹಾಸನಾಂಬ ದರ್ಶನೋತ್ಸವಕ್ಕೆ 10 ಲಕ್ಷಕ್ಕೂ ಹೆಚ್ಚು ಮಂದಿ ಭಕ್ತರು ಆಗಮಿಸುವ ನಿರೀಕ್ಷೆ ಇದೆ ಶಕ್ತಿ ಯೋಜನೆ ಸೇರಿದಂತೆ ದಸರಾ ಸಂದರ್ಭದಲ್ಲಿ ದರ್ಶನೋತ್ಸವ ಇರುವುದರಿಂದ ಮಹಿಳಾ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ನಿರೀಕ್ಷೆ ಇದೆ. ಆದ್ದರಿಂದ ಈ ಬಾರಿ ಮೂಲ ಸೌಕರ್ಯ ಹೆಚ್ಚಿಸುವ ಸಂಬಂಧ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಹೇಳಿದರು.

೮ ವರ್ಷದ ಬಳಿಕ ದೇವಾಲಯಕ್ಕೆ ಈ ಬಾರಿ ಬಣ್ಣ ಹಚ್ಚಲಾಗಿದ್ದು ಕಾಮಗಾರಿ ಬಹುತೇಕ ಪೂರ್ಣವಾಗಿದೆ. ಸಣ್ಣಪುಟ್ಟ ದುರಸ್ತಿ ಕಾಮಗಾರಿಗಳು ನಡೆದಿದ್ದು ನೂತನ ಕಳಸ ಪ್ರತಿಷ್ಠಾಪನೆಯೂ ಮಾಡಲಾಗುತ್ತಿದೆ ಎಂದು ವಿವರಿಸಿದರು .

ನೀರು- ಮಜ್ಜಿಗೆ ವೃದ್ಧ ರಿಗೆ ಪ್ರತ್ಯೇಕ ದಾರಿ:

ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಈ ಬಾರಿ ಆಗಮಿಸುವ ಹಿನ್ನೆಲೆಯಲ್ಲಿ ದೇವಾಲಯದ ಸಮೀಪದ ಬ್ರಾಹ್ಮಣ ಬೀದಿ, ಗ್ಯಾರೇಜ್ ರಸ್ತೆ ಹಾಗೂ ಸುತ್ತಮುತ್ತಲು ಹೆಚ್ಚಿನ ಬ್ಯಾರಿಕೆಡ್ ಅಳವಡಿಕೆ ಮಾಡಲಾಗುತ್ತಿದೆ. ಜರ್ಮನ್ ಟೆಂಟ್ ಹಾಗೂ ಭಕ್ತರ ಸಾಗುವ ರಸ್ತೆಯುದ್ದಕ್ಕೂ ಮ್ಯಾಟ್ ವ್ಯವಸ್ಥೆ ಮಾಡಲಾಗುತ್ತಿದೆ. ಕುಡಿಯುವ ನೀರು, ಮಜ್ಜಿಗೆ ದಾನಿಗಳ ಸಹಾಯದಿಂದ ವ್ಯವಸ್ಥೆ ಮಾಡುವ ಕ್ರಮ ಕೈಗೊಳ್ಳಲಾಗಿದ್ದು ವೃದ್ಧರಿಗೆ ಪ್ರತ್ಯೇಕ ದರ್ಶನ ವ್ಯವಸ್ಥೆಯನ್ನು ಸಹ ಈ ಬಾರಿಯ ವಿಶೇಷವಾಗಿದೆ.

ಮಹಾಭಾರತ ಪ್ರದರ್ಶನ:
ದೇವರ ದರ್ಶನಕ್ಕೆ ಸಾಗುವ ಮಾರ್ಗ ಮಧ್ಯದಲ್ಲಿನ ನಿರ್ದಿಷ್ಟ ಪ್ರದೇಶದಲ್ಲಿ ಎಲ್ಇಡಿ ಪರದೆಯನ್ನು ಅಳವಡಿಸಿ ಪೌರಾಣಿಕ ಮಹಾಭಾರತ ಚಿತ್ರಕಥೆ ಪ್ರದರ್ಶನವನ್ನು ಮಾಡಲಾಗುತ್ತಿದೆ ಎಂದು ಡಿಸಿ ತಿಳಿಸಿದರು.

೧೦೦೦/೩೦೦ ರೂ ಪಾಸ್: ಕ್ಯೂ ಅರ್ ಕೊಡ್

ಒಂದು ಸಾವಿರ ಹಾಗೂ 300 ಮತದ ಪಾಸ್ ವಿತರಣೆಗೆ ಕ್ರಮ ಕೈಗೊಳ್ಳಲಾಗಿದ್ದು ಅಕ್ರಮ ತಡೆಯುವ ನಿಟ್ಟಿನಲ್ಲಿ ಕ್ಯೂಆರ್ ಕೋಡ್ ಒಳಗೊಂಡಂತಹ ಪಾಸ್ ವಿತರಣೆ ಮಾಡಲಾಗುತ್ತಿದೆ. ಪ್ರತಿ ಭಕ್ತರು ದರ್ಶನಕ್ಕೆ ಆಗಮಿಸುವ ವೇಳೆ ಈ ಪಾಸ್ ಗಳನ್ನು ಸ್ಕ್ಯಾನ್ ಮಾಡಲಾಗುವುದು ಒಂದು ಬಾರಿ ಸ್ಕ್ಯಾನ್ ಮಾಡಿದ ಪಾಸ್ ಮತ್ತೊಮ್ಮೆ ಬಳಕೆಗೆ ಅವಕಾಶ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಪ್ರತಿ ಭಕ್ತರಿಗೆ ದೊನ್ನೆ ಪ್ರಸಾದ:

ಈ ಬಾರಿ ದರ್ಶನಕ್ಕೆ ಆಗಮಿಸುವ ಪ್ರತಿಯೊಬ್ಬರಿಗೂ ದರ್ಶನದ ನಂತರ ದೊನ್ನೆ ಪ್ರಸಾದ ವ್ಯವಸ್ಥೆ ಮಾಡಲಾಗಿದೆ ನವಂಬರ್ 2 ಹಾಗೂ ನವೆಂಬರ್ ಹದಿನೈದು ಹೊರತುಪಡಿಸಿ ಪ್ರತಿದಿನವೂ 24 ಗಂಟೆ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದ್ದು, ನಿಗದಿತ ಸ್ಥಳದಲ್ಲಿ ಐವತ್ತು ಶೌಚಾಲಯ , ಅಂಗವಿಕಲರಿಗೆ ಎರಡು ಎಲೆಕ್ಟ್ರಾನಿಕ್ ವೀಲ್ ಚೇರ್ ಹಾಗೂ 20 ಸಾಧಾರಣ ವೀಲ್ ಚೇರನ್ನು ವ್ಯವಸ್ಥೆ ಮಾಡಲಾಗಿದೆ.

ಗರ್ಭಗುಡಿಯ ಸಮೀಪ ಹಾಗೂ ಇತರಡೆ ಅವ ನಿಯಂತ್ರಿತ ವ್ಯವಸ್ಥೆಯನ್ನು ಸಹ ಕಲ್ಪಿಸಲಾಗಿದೆ. ಭಕ್ತರ ಅನುಕೂಲಕ್ಕೆ ತಕ್ಕಂತೆ ಸುಗಮ ದರ್ಶನ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಎಲ್ಲ ಪ್ರಮುಖ ಬ್ಯಾರಿಕೆಡ್ ಪಾಯಿಂಟ್ಗಳಲ್ಲಿ ಕಂದಾಯ ಹಾಗೂ ಪೊಲೀಸ್ ಇಲಾಖೆ ಸಿಬ್ಬಂದಿಗಳನ್ನು ನಿಯೋಜನೆ ಮಾಡಲಾಗಿದ್ದು, 36 ವಾಕಿ ಟಾಕಿ ವ್ಯವಸ್ಥೆ ಮಾಡಲಾಗುತ್ತಿದೆ ಎಂದರು .

ಎರಡು ತುರ್ತು ವಾಹನ ದೊಂದಿಗೆ ಆರೋಗ್ಯ ಇಲಾಖೆ ಸಿಬ್ಬಂದಿಗಳನ್ನು ನಿಯೋಜನೆ ಮಾಡಲಾಗುವುದು , ಅಗ್ನಿ ಅವಘಡ ನಿಯಂತ್ರಣಕ್ಕೆ ಫೈರ್ ಎಗ್ಸಾಸ್ಟಿಂಗ್ ಸಿಲೆಂಡರ್ ಆಯಕಟ್ಟು ಪ್ರದೇಶದಲ್ಲಿ ಅಳವಡಿಸಲಾಗುತ್ತಿದೆ.

ನಗರಸಭೆ ಹಿಂಭಾಗ ಪಾರ್ಕಿಂಗ್:

ನಗರಸಭೆ ಹಿಂಭಾಗದ ಸ್ಥಳದಲ್ಲಿ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ. ವಿವಿಐಪಿ ಸೇರಿದಂತೆ ಆಡಳಿತ ಮಂಡಳಿಯಿಂದ ನಿಯೋಜನೆ ಮಾಡಿರುವ ನಿರ್ದಿಷ್ಟ ವಾಹನಗಳಿಗೆ ಮಾತ್ರ ದೇವಾಲಯದ ಬಳಿಗೆ ತೆರಳಲು ಅವಕಾಶ ಮಾಡಲಾಗಿದೆ ಉಳಿದಂತೆ ಯಾವುದೇ ವಾಹನವನ್ನು ದೇವಾಲಯದ ಸಮೀಪ ಬಿಡುವುದಿಲ್ಲ ಎಂದರು.

ದೇವಾಲಯದ ಖಾತೆಯಲ್ಲಿ ೮.೫ ಕೊಟಿ:

ಹಾಸನಾಂಬ ದರ್ಶನೋತ್ಸವ ಸುಸೂತ್ರವಾಗಿ ನಡೆಯಲು 3.5 ಕೋಟಿ ಅನುದಾನ ಬಳಕೆಗೆ ಅಂದಾಜಿಸಲಾಗಿದ್ದು ದೇವಾಲಯದ ಬ್ಯಾಂಕ್ ಖಾತೆಯಲ್ಲಿ 8.5 ಕೋಟಿ ಹಣ ಇದೆ ಎಂದು ಮಾಹಿತಿ ನೀಡಿದರು . ಇದುವರೆಗೂ ಸಹ ಭಕ್ತರಿಂದ ಬಂದಂತಹ ಹಣದಿಂದಲೇ ದೇವಾಲಯದ ದುರಸ್ತಿ ಹಾಗೂ ದರ್ಶನ ಉತ್ಸವಕ್ಕೆ ಬಳಕೆ ಮಾಡಲಾಗುತ್ತಿದೆ ಭಕ್ತರ ಹಣ ಪೋಲಾಗದಂತೆ ಬಳಸಲು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಸತ್ಯಭಾಮಾ ಹೇಳಿದರು.

ಮಹಾರಾಜ ಪಾರ್ಕ್ ನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ;

ನಗರದ ಮಹಾರಾಜ ಪಾರ್ಕ್ ನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಆಯೋಜನೆ ಮಾಡಲಾಗುತ್ತಿದ್ದು 15 ದಿನವು ಧ್ವನಿ ಮತ್ತು ಬೆಳಕಿನ ಕಾರಂಜಿ ವ್ಯವಸ್ಥೆಯನ್ನು ಕಲ್ಪಿಸಲು ನಗರಸಭೆಗೆ ತಿಳಿಸಲಾಗಿದೆ ಎಂದರು.

ಸಿಬ್ಬಂದಿಗಳಿಗೆ ಹಾಗೂ ಸ್ಕೌಟ್ಸ್ ಮತ್ತು ಗೈಡ್ಸ್ ಆಶಾ ಕಾರ್ಯಕರ್ತೆಯರಿಗೆ ಕಂದಾಯ ಇಲಾಖೆ ವತಿಯಿಂದಲೇ ಊಟದ ವ್ಯವಸ್ಥೆಯನ್ನು ಮಾಡಲಾಗುತ್ತಿದೆ ಎಂದು ವಿವರಿಸಿದರು.

ಮಹಿಳಾ ಪೊಲೀಸ್ ವ್ಯವಸ್ಥೆಗೆ ಕ್ರಮ:

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಹಮದ್ ಸುಜೀತಾ ಮಾತನಾಡಿ ಈ ಬಾರಿ ಶಕ್ತಿ ಯೋಜನೆ ಜಾರಿಯಲ್ಲಿರುವುದರಿಂದ ಹೆಚ್ಚಿನ ಮಹಿಳಾ ಭಕ್ತರು ಹಾಸನಾಂಬ ದರ್ಶನೋತ್ಸವಕ್ಕೆ ಆಗಮಿಸಲಿದ್ದಾರೆ. ಕಳೆದ ಬಾರಿಗಿಂತ ಒಂದುವರೆ ಪಟ್ಟು ಹೆಚ್ಚಿನ ಭಕ್ತರ ನಿರೀಕ್ಷೆಯಿದ್ದು ಮಹಿಳಾ ಪೊಲೀಸರನ್ನು ಹೆಚ್ಚು ನಿಯೋಜನೆ ಮಾಡುವ ಸಂಬಂಧ ಕ್ರಮ ಕೈಗೊಳ್ಳಲಾಗಿದೆ.

ಎಂಟು ತಂಡಗಳನ್ನು ರಚಿಸಿ ಸೂಕ್ತ ಬಂದೂಬಸ್ತ್ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಸನ್ನದ್ಧವಾಗಿದೆ. 10.7 ಕಿಲೋಮೀಟರ್ ದರ್ಶನ ಮಾರ್ಗ ವ್ಯವಸ್ಥೆ ಮಾಡಲಾಗಿದ್ದು ನಗರದಲ್ಲಿ ಟ್ರಾಫಿಕ್ ನಿಯಂತ್ರಣಕ್ಕೆ ರೂಟ್ ಮ್ಯಾಪ್ ಸೇರಿದಂತೆ ಸಿಬ್ಬಂದಿ ನಿಯೋಜನೆ ಸಂಬಂಧ ಮುಂದಿನ ಎರಡು ಮೂರು ದಿನಗಳಲ್ಲಿ ಸೂಕ್ತ ಕ್ರಮ ಕೈಗೊಂಡು ಮಾಹಿತಿ ನೀಡಲಾಗುವುದು ಎಂದ ಅವರು ದೇವಸ್ಥಾನದ ಒಳಗೆ ಹಾಗೂ ಹೊರಗೆ ಕಂದಾಯ ಹಾಗೂ ಪೊಲೀಸ್ ಇಲಾಖೆಯ ಸಿಬ್ಬಂದಿಗಳು ಸಮನ್ವಯತೆಯಿಂದ ಕೆಲಸ ಮಾಡಲಿದ್ದು ಆಯಕಟ್ಟು ಪ್ರದೇಶದಲ್ಲಿ ಸಿಸಿ ಕ್ಯಾಮೆರಾ ಸ್ಕ್ಯಾನಿಂಗ್ ವ್ಯವಸ್ಥೆಯನ್ನು ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು .
ನಿಗದಿತ ಸ್ಥಳದಲ್ಲಿ ಬ್ಯಾರಿಕೆಡ್ ವ್ಯವಸ್ಥೆ ಸೇರಿದಂತೆ ವಾಚ್ ಟವರ್ ಬಗ್ಗೆಯೂ ಚಿಂತನೆ ನಡೆದಿದೆ ಎಂದರು.

ಶಾಸಕರಾದ ಸ್ವರೂಪ್ ಪ್ರಕಾಶ್ ಮಾತನಾಡಿ ಜಿಲ್ಲೆಯ ಅಧಿದೇವತೆಯ ಹಾಸನಂಬ ದರ್ಶನೋತ್ಸವ ಈ ಬಾರಿ ಅದ್ದೂರಿಯಾಗಿ ನಡೆಸಲು ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಎಂಟು ವರ್ಷದ ನಂತರ ಗರ್ಭಗುಡಿಗೆ ಸೇರಿದಂತೆ ಮುಖ್ಯ ಗೋಪುರಕ್ಕೆ ಬಣ್ಣ ಹಾಕಲಾಗಿದ್ದು, ಹೊಸದಾಗಿ ಕಳಸ ಪ್ರತಿಷ್ಠಾಪನೆ ಸಹ ಮಾಡಲಾಗತ್ತಿದೆ. 

ನವೆಂಬರ್ ಎರಡು ಮತ್ತು 15ನೇ ತಾರೀಕು ಸಾರ್ವಜನಿಕರಿಗೆ ದರ್ಶನ ಇರುವುದಿಲ್ಲ ಉಳಿದ ದಿನಗಳಲ್ಲಿ 24 ಗಂಟೆ ದರ್ಶನದ ಅವಕಾಶ ಕಲ್ಪಿಸಲಾಗಿದ್ದು ಸಾರ್ವಜನಿಕರು ಸಹಕರಿಸಬೇಕು ಹಾಗೂ ಹಾಸನಾಂಬ ದರ್ಶನೋತ್ಸವ ಯಶಸ್ವಿಯಾಗಿ ಪೂರ್ಣಗೊಳಿಸಲು ಎಲ್ಲರು  ಕೈಜೋಡಿಸಿ ಎಂದು ಮನವಿ ಮಾಡಿದರು .

ಹಾಸನಾಂಬ ದಶಂಬೋತ್ಸವ ಹಿನ್ನೆಲೆಯಲ್ಲಿ ರಾಜ್ಯ ಸೇರಿದಂತೆ ನೆರೆ ರಾಜ್ಯಗಳಿಂದಲೂ ಸಾವಿರಾರು ಭಕ್ತರು ಆಗಮಿಸುವ ಹಿನ್ನೆಲೆಯಲ್ಲಿ ನಗರದ ರಸ್ತೆಗಳನ್ನು ಗುಂಡಿ ಮುಚ್ಚುವ ಕೆಲಸ ಸೇರಿದಂತೆ ಸೌಂದರ್ಯಿಕರಣಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ ಎಂದು ಸ್ವರೂಪ್ ಹೇಳಿದರು.

ಬರುವಂತಹ ಲಕ್ಷಾಂತರ ಮಂದಿ ಭಕ್ತರಿಗೆ ಅಗತ್ಯ ಮೂಲಸೌಕರ್ಯ ಒದಗಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲು ಜಿಲ್ಲಾಡಳಿತಕ್ಕೆ ಸೂಚನೆ ನೀಡಲಾಗಿದೆ ಎಂದರು.

ಈ ಸಂದರ್ಭದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಶಾಂತಲಾ, ವಾರ್ತಾ ಅಧಿಕಾರಿ ಮೀನಾಕ್ಷಮ್ಮ ಹಾಗೂ ಇತರೆ ಅಧಿಕಾರಿಗಳು ಇದ್ದರು.

Post a Comment

0 Comments