ಕೋವಿಡ್ ಸೋಂಕು ಪತ್ತೆಗೆ ಸರ್ವೆ ಮಾಡಲು ಜಿಲ್ಲಾಧಿಕಾರಿ ಸೂಚನೆ


ಹಾಸನ.ಸೆ.9.(ಕರ್ನಾಟಕ ವಾರ್ತೆ):- ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಸೋಂಕಿತರನ್ನು ಪತ್ತೆಹಚ್ಚಲು ಆಶಾ ಕಾರ್ಯಕರ್ತೆಯರು ಮನೆ ಮನೆಗೆ ಭೇಟಿ ನೀಡಿ ಸರ್ವೆ ಮಾಡಲು ಕ್ರಮವಹಿಸುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಆರ್.ಗಿರೀಶ್ ಸೂಚಿಸಿದ್ದಾರೆ.

ಜಿಲ್ಲಾಧಿಕಾರಿ ಕಚೇರಿಯಲ್ಲಿಂದು ತಾಲ್ಲೂಕು ಮಟ್ಟದ ಅಧಿಕಾರಿಗಳೊಂದಿಗೆ ವೀಡಿಯೋ ಸಂವಾದ ನಡೆಸಿ ಮಾತನಾಡಿದ ಅವರು ಕೋವಿಡ್-19 ಸೋಂಕಿತರು ಆಸ್ಪತ್ರೆಗೆ ಬರುವ ಮುನ್ನವೇ ಅಥವಾ ಆಸ್ಪತ್ರೆಗೆ ಬಂದ ಕೂಡಲೇ ಸಾವನ್ನಪ್ಪುವುದನ್ನು ತಪ್ಪಿಸಲು ಅಧಿಕಾರಿಗಳು ಹೆಚ್ಚು ಮುತುವರ್ಜಿವಹಿಸಿ ಕಾರ್ಯನಿರ್ವಹಿಸಬೇಕು ಎಂದರು.                                             

ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ತಾಲ್ಲೂಕು ಆರೋಗ್ಯ ಅಧಿಕಾರಿಗಳು ಆಶಾ ಕಾರ್ಯಕರ್ತೆಯರಿಗೆ ಸೂಕ್ತ ಸಲಹೆ ಹಾಗೂ ತರಬೇತಿಯನ್ನು ನೀಡಿ, ಸರ್ವೆ ಕುರಿತಾಗಿ ಶೀಘ್ರವೇ ವರದಿ ನೀಡುವಂತೆ ಅವರು ಸೂಚಿಸಿದರು.

ರಕ್ತದೊತ್ತಡ, ಮದುಮೇಹದಂತಹ ರೋಗಗಳಿರುವವರಿಗೆ ಸೋಂಕು ತಗುಲಿದರೆ ಅಥವಾ ಸೋಂಕಿತರಲ್ಲಿ ವೈರಲ್ ರೇಟ್ ಜಾಸ್ತಿ ಇದ್ದಲ್ಲಿ ಯಾವ ಚಿಕಿತ್ಸೆ ನೀಡಿದರೂ ಸಹ ಪ್ರಯೋಜನವಿಲ್ಲ. ಹಾಗಾಗಿ ಆಶಾ ಕಾರ್ಯಕರ್ತೆಯರು ಮನೆ ಮನೆಗೆ ಭೇಟಿ ನೀಡಿ, ಮುಖ್ಯವಾಗಿ ಕೋ-ಮಾರ್ಬಿಡ್ ಸ್ಥಿತಿಯಲ್ಲಿರುವವರ ಆಮ್ಲಜನಕ ಮಟ್ಟವನ್ನು ಪರೀಕ್ಷೆ ಮಾಡಬೇಕು ಎಂದು ಅವರು ಹೇಳಿದರು.

ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ.ಎ ಪರಮೇಶ್, ಅಪರ ಜಿಲ್ಲಾಧಿಕಾರಿ ಕವಿತ ರಾಜಾರಾಂ,ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ|| ಸತೀಶ್, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಾದ ಬಿ.ಎ ಜಗದೀಶ್ ಹಾಗೂ ಮತ್ತಿತರರು ಸಭೆಯಲ್ಲಿ ಹಾಜರಿದ್ದರು.

Post a Comment

0 Comments