ಮರಣ ಪ್ರಮಾಣ ನಿಯಂತ್ರಿಸಲು ಹೆಚ್ಚಿನ ಕಾಳಜಿ ವಹಿಸಿ: ಸಚಿವ ಶ್ರೀರಾಮುಲು



ಹಾಸನ,ಸೆ.09(ಕರ್ನಾಟಕ ವಾರ್ತೆ):- ಕೋವಿಡ್-19 ಮರಣ ಪ್ರಮಾಣವನ್ನು ಸಂಪೂರ್ಣವಾಗಿ ನಿಯಂತ್ರಿಸಲು ಹೆಚ್ಚಿನ ಕಾಳಜಿ ವಹಿಸಿ. ಗರಿಷ್ಠ ಹಾಗೂ ವ್ಯವಸ್ಥಿತ ಪ್ರಯತ್ನದೊಂದಿಗೆ ಚಿಕಿತ್ಸೆ ನೀಡಿ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ಶ್ರೀರಾಮುಲು ಅವರು ಸೂಚನೆ ನೀಡಿದ್ದಾರೆ.
 ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳು, ಜಿಲ್ಲಾ ಶಸ್ತ್ರ ಚಿಕಿತ್ಸಕರೊಂದಿಗೆ ವೀಡಿಯೋ ಸಂವಾದ ನಡೆಸಿದ ಸಚಿವರು ವೈದ್ಯರ ಸೇವೆ ನಿಜಕ್ಕೂ ಅಭಿನಂದನಾರ್ಹ. ಆದರೆ ಕೊರೋನಾ ಸಾವಿನ ಸಂಖ್ಯೆ ಕಡಿಮೆ ಮಾಡಲು ಇನ್ನಷ್ಟು ಶ್ರಮಿಸಿ ಎಂದರು.
 ಆಸ್ಪತ್ರೆಗಳಲ್ಲಿನ ಕೊರತೆಗಳನ್ನು ಪಟ್ಟಿಮಾಡಿ ಆಮ್ಲಜನಕ ಪೂರೈಕೆ, ಸ್ವಚ್ಚತೆ, ಔಷದೋಪಚಾರಗಳು ಹಾಗೂ ಕೌನ್ಸಿಲಿಂಗ್ ಬಗ್ಗೆ ಪ್ರತಿ ಜಿಲ್ಲೆಗಳು ಗಮನಿಸಿ ಎಂದು ಅವರು ಹೇಳಿದರು.
 ಸೋಂಕಿತರ ಪ್ರಾಥಮಿಕ ಹಂತದ ಸಂಪರ್ಕಿತರು, ದ್ವಿತೀಯ ಹಂತದ ಸಂಪರ್ಕಿತರು ಹಾಗೂ ದುರ್ಬಲ ವರ್ಗದವರನ್ನು ಹೆಚ್ಚಾಗಿ ಪತ್ತೆ ಮಾಡಿ ಕೋವಿಡ್-19 ಪರೀಕ್ಷೆಗೆ ಒಳಪಡಿಸುವ ಮೂಲಕ ಮರಣ ಪ್ರಮಾಣವನ್ನು ಕಡಿಮೆ ಮಾಡಿ ಎಂದು ಸಚಿವರಾದ ಶ್ರೀರಾಮುಲು ಅವರು ಅಧಿಕಾರಿಗಳಿಗೆ ಸೂಚಿಸಿದರು.
 ಎಲ್ಲಾ ಜಿಲ್ಲೆಗಳಲ್ಲಿನ ನುರಿತ ತಜ್ಞರ ತಂಡಗಳು ಪ್ರತಿ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಿಗೆ ಭೇಟಿ ನೀಡಿ ಪರಿಶೀಲಿಸಿ ಜಿಲ್ಲಾ ಮಟ್ಟದ ಸಮಿತಿಗಳು ರಾಜ್ಯ ಮಟ್ಟದ ಸಮಿತಿಗೆ ಸಂಪೂರ್ಣ ಮಾಹಿತಿ ನೀಡಬೇಕು ಎಂದು ಅವರು ಅಧಿಕಾರಿಗಳಿಗೆ ತಿಳಿಸಿದರು.
 ಪ್ರತಿ ಜಿಲ್ಲೆಗಳಲ್ಲಿಯೂ ಸಹಾಯಕ ಔಷಧ ನಿಯಂತ್ರಕರನ್ನು ನೇಮಿಸಿ ಅವರು ಜಿಲ್ಲೆಯಲ್ಲಿನ ಆಸ್ಪತ್ರೆಗಳ ಆಮ್ಲಜನಕದ ಕೊರತೆ ಹಾಗೂ ಅವಶ್ಯಕತೆಗಳ ಸಹಾಯಕ ಔಷಧ ನಿಯಂತ್ರಕರು ಹೆಚ್ಚಿನ ನಿಗಾವಹಿಸಬೇಕು ಹಾಗೂ ಸಮಸ್ಯೆಗಳಿದ್ದಲ್ಲಿ ರಾಜ್ಯ ಮಟ್ಟದ ಸಮಿತಿಗೆ ಮಾಹಿತಿ ನೀಡಬೇಕು ಎಂದು ಸಚಿವರಾದ ಶ್ರೀರಾಮುಲು ಅವರು ಹೇಳಿದರು.
 ಹೋಂ ಐಸೋಲೇಷನ್ ನಲ್ಲಿರುವ ವ್ಯಕ್ತಿಗಳ ಸಂಪೂರ್ಣ ಅಂಕಿ ಸಂಖ್ಯೆ ತಿಳಿಸಬೇಕು ಹಾಗೂ ಗರ್ಭಿಣಿಯರು ಮತ್ತು ಹೆಚ್.ಐ,ವಿ ಸೋಂಕಿತರನ್ನು ಸರ್ವೇ ಮಾಡಿ ರೋಗಲಕ್ಷಣಗಳು ಕಂಡು ಬಂದಲ್ಲಿ ಅವರನ್ನು ಚಿಕಿತ್ಸೆಗೆ ಒಳಪಡಿಸಿ ಅವುಗಳ ಅಂಕಿ ಸಂಖ್ಯೆ ಮಾಹಿತಿ ನೀಡಿ ಎಂದು ಸಚಿವರು ಸೂಚಿಸಿದರು.
 ಜಿಲ್ಲೆಯಲ್ಲಿನ ಬೂತ್ ಮಟ್ಟದ ಅಧಿಕಾರಿಗಳಿಗೆ ಹಾಗೂ ಆಶಾ ಕಾರ್ಯಕರ್ತೆಯರಿಗೆ ಪಲ್ಸ್‍ಆಕ್ಸಿ ಮೀಟರ್ ನೀಡಬೇಕು ಹಾಗೂ ಅವರು ಹೆಚ್ಚಿನ ಸಂಖ್ಯೆಯಲ್ಲಿ ರೋಗ ಲಕ್ಷಣಗಳಿರುವವರನ್ನು ಪತ್ತೆಹಚ್ಚುವಂತೆ ಸೂಚನೆ ನೀಡಿ ಎಂದು ಸಚಿವರಾದ ಶ್ರೀರಾಮುಲು ಅವರು ಸೂಚಿಸಿದರು.
 ಜಿಲ್ಲಾಧಿಕಾರಿ ಆರ್. ಗಿರೀಶ್ ಅವರು ಮಾತನಾಡಿ ಜಿಲ್ಲಾ ಆಸ್ಪತ್ರೆಯಲ್ಲಿ ಯಾವುದಾದರು ಹುದ್ದೆಗಳು ಖಾಲಿ ಇದ್ದಲ್ಲಿ ಅವುಗಳನ್ನು ಶೀಘ್ರವಾಗಿ ಭರ್ತಿ ಮಾಡಿ ಚಿಕಿತ್ಸೆಗೆ ಯಾವುದೇ ಸಿಬ್ಬಂದಿಗಳ ಕೊರತೆಯಾಗದಂತೆ ನಿಗಾವಹಿಸಿ ಎಂದು ಅವರು ಜಿಲ್ಲಾ ಶಸ್ತ್ರ ಚಿಕಿತ್ಸಕರಿಗೆ ತಿಳಿಸಿದರು.
 ಜಿಲ್ಲೆಯಲ್ಲಿನ ಯಾವುದೇ ಆಸ್ಪತ್ರೆಗಳಲ್ಲಿಯೂ ವೈದ್ಯಕೀಯ ಉಪಕರಣಗಳ ಕೊರತೆಯಾಗಬಾರದು ಯಾವುದಾದರು ಸಮಸ್ಯೆಗಳಿದ್ದರೆ ಪರಿಹರಿಸುವಂತೆ ಸೂಚಿಸಿದರಲ್ಲದೇ, ಜಿಲ್ಲೆಗೆ ನೀಡಲಾಗಿರುವ ವೆಂಟಿಲೇಟರ್‍ಗಳನ್ನು ಸರಿಯಾಗಿ ಹಂಚಿಕೆ ಮಾಡಿ ಅಳವಡಿಸಿ ಎಂದರು.
 ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಬಿ.ಎ. ಪರಮೇಶ್, ಉಪ ವಿಭಾಗಾಧಿಕಾರಿ ಡಾ|| ನವೀನ್ ಭಟ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ|| ಸತೀಶ್, ಜಿಲ್ಲಾ ಶಸ್ತ್ರ ಚಿಕಿತ್ಸಕರಾದ ಡಾ|| ಕೃಷ್ಣ ಮೂರ್ತಿ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ|| ಹಿರಣ್ಣಯ್ಯ ಮತ್ತಿತರ ಅಧಿಕಾರಿಗಳು ಹಾಜರಿದ್ದರು.
**********

Post a Comment

0 Comments