ಬೆಳೆ‌ಹಾನಿ ಪರಿಹಾರ ಶೀಘ್ರ ವಿತರಣೆಗೆ ಸಚಿವರ ಸೂಚನೆ


ಹಾಸನ ಸೆ.09(ಕರ್ನಾಟಕ ವಾರ್ತೆ): ಆಲೂರು ಮತ್ತು ಸಕಲೇಶಪುರ ತಾಲ್ಲೂಕಿನಲ್ಲಿ ಆನೆ ಹಾವಳಿಯಿಂದ ಉಂಟಾಗಿರುವ ಬೆಳೆ‌ಹಾನಿ ಪರಿಹಾರ ಶೀಘ್ರ ವಿತರಣೆ ಅಗತ್ಯ ಕ್ರಮವಹಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವರು  ಹಾಗೂ ಆಹಾರ ನಾಗರೀಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವರಾದ ಕೆ‌ ಗೋಪಾಲಯ್ಯ ಅವರು ಅರಣ್ಯ ಇಲಾಖೆ  ಅಧಿಕಾರಿಗಳಿಗೆ ನಿರ್ದೇಶನ‌ ನೀಡಿದ್ದಾರೆ.

ಆಲೂರು ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಏರ್ಪಡಿಸಿದ್ದ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಸಚಿವರು ಸೆ 20 ರ ಒಳಗಾಗಿ ಅರಣ್ಯ ಸಚಿವರನ್ನು ಜಿಲ್ಲೆಗೆ ಕರೆತಂದು ಆನೆ ಹಾವಳಿ ,ಆನೆ ಕಾರಿಡಾರ್ ,ಬೆಳೆ ಪರಿಹಾರ ಮತ್ತಿತರ ವಿಷಯಗಳ ಕುರಿತು  ಸ್ಥಳೀಯವಾಗಿ ಸಮಸ್ಯೆ ಪರಿಹಾರಕ್ಕೆ  ಕ್ರಮವಹಿಸುವುದಾಗಿ ಹೇಳಿದರು.
ಅಧಿಕಾರಿಗಳು ದಕ್ಷತೆಯಿಂದ ಹಾಗೂ ಜನಪರವಾಗಿ ಸೇವೆ ಸಲ್ಲಿಸಬೇಕು .ಸರ್ಕಾರದ ಯೋಜನೆಗಳನ್ನು ಸಕಾಲದಲ್ಲಿ ಅರ್ಹ ಫಲಾನುಭವಿಗಳಿಗೆ ತಲುಪಿಸುವಂತೆ ಸಚಿವರು ಸೂಚನೆ ನೀಡಿದರು.
ಕಾಮಗಾರಿಗಳ ಅನುಷ್ಠಾನದಲ್ಲಿ ವಿಳಂಬದ ಬಗ್ಗೆ ಅಸಮಾದಾನ ವ್ಯಕ್ತಪಡಿಸಿದ ಸಚಿವರು ಇನ್ನೆರೆಡು ತಿಂಗಳೊಳಗಾಗಿ ಪ್ರಗತಿ ತೋರಿಸದಿದ್ದಲಿ ಸಂಬಂಧಪಟ್ಟ  ಇಂಜಿನಿಯರ್ ವಿರುದ್ದ ಕ್ರಮಕ್ಕೆ ಶಿಫಾರಸು ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಕೊವಿಡ್ 19 ನಿಯಂತ್ರಣಕ್ಕೆ ಜಿಲ್ಲಾಡಳಿತ ಹಾಗೂ ತಾಲ್ಲೂಕು ಆಡಳಿತ ಸಾಕಷ್ಟು ಶ್ರಮಿಸಿದ್ದು ಮುಂದೆಯೂ ಇನ್ನಷ್ಟು ಪರಿಣಾಮಕಾರಿಯಾಗಿ ಪ್ರಯತ್ನ ಮುಂದುವರೆಸುವಂತೆ ಸಚಿವರು ಹೇಳಿದರು.                     

ಜಿಲ್ಲೆಯ ಪ್ರಗತಿ ತಮ್ಮ ಗುರಿ ಎಲ್ಲಾ ಜನ ಪ್ರತಿನಿಧಿಗಳ ಸಹಕಾರ ಇದ್ದು ಅಧಿಕಾರಿಗಳು ಹೆಚ್ಚಿನ ಶ್ರಮವಹಿಸಬೇಕಿದೆ ಎಂದು ಸಚಿವರು ಹೇಳಿದರು.

ಶಾಸಕರಾದ ಹೆಚ್.ಕೆ.ಕುಮಾರ ಸ್ವಾಮಿ ಅವರು ಸ್ಥಳೀಯ ಆನೆ ಹಾವಳಿ ,ಬೆಳೆಪರಿಹಾರ,ಅತಿವೃಷ್ಟಿ ಹಾನಿ ವಿಷಯಗಳ ಕುರಿತು ಸಚಿವರ ಗಮನಕ್ಕೆ ತಂದರು.
ಸಕಲೇಶಪುರ ಮತ್ತು ಆಲೂರು ತಾಲ್ಲೂಕುಗಳು ಪ್ರತಿ ವರ್ಷ ಮಳೆ ಹಾನಿಯಿಂದ ಬಾದಿತವಾಗುತ್ತಿದ್ದು, ರಸ್ತೆ ಕಟ್ಟಡಗಳ ದುರಸ್ತಿ ಹಾಗೂ ಅಭಿವೃದ್ಧಿಗೆ ಹೆಚ್ಚಿನ ಅನುದಾನದ ಅಗತ್ಯ ಇದೆ ಎಂದು ತಿಳಿಸಿದರು.

ಜಿಲ್ಲಾಧಿಕಾರಿ ಆರ್. ಗಿರೀಶ್ ಅವರು ಮಾತನಾಡಿ ಪ್ರತಿಯೊಂದು ಇಲಾಖಾ ಅಧಿಕಾರಿಗಳು ತಮಗೆ ನೀಡಿರುವ ಆರ್ಥಿಕ ಹಾಗೂ ಭೌತಿಕ ಗುರಿ ಸಾಧನೆಗೆ ಶ್ರಮಿಸಬೇಕು .ಸಾರ್ವಜನಿಕ ರೊಂದಿಗೆ ಸಂಯಮದಿಂದ ವರ್ತಿಸಿ ಸಕಾಲದಲ್ಲಿ ಸೇವೆ ಒದಗಿಸಬೇಕು ಎಂದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ.ಎ. ಪರಮೇಶ್ ಅವರು ಗ್ರಾಮೀಣಾಭಿವೃದ್ಧಿ ಯೋಜನೆಗಳ ಅನುಷ್ಠಾನದಲ್ಲಿ‌ ನಿರ್ಲಕ್ಷ್ಯವಹಿಸದಂತೆ ಹಾಗೂ ಉದ್ಯೋಗ ಖಾತರಿ ಯೋಜನೆಯನ್ನು ಸದ್ಬಳಕೆ‌ ಮಾಡಿಕೊಂಡು ಗ್ರಾಮ ಹಾಗೂ ಸಮುದಾಯದ ಸೊತ್ತುಗಳನ್ನು ಸೃಷ್ಟಿ ಮಾಡುವಂತೆ ತಿಳಿಸಿದರು.

ಉಪವಿಭಾಗಾಧಿಕಾರಿ ಗಿರಿಶ್ ನಂದನ್ ,ತಹಶಿಲ್ದಾರರ ಶಿರೀನ್ವತಾಜ್  ಮತ್ತಿತರರು ಉಪಸ್ಥಿತರಿದ್ದರು.

Post a Comment

0 Comments