ಹಿಮತ್ ಸಿಂಗ್ ಕ ಸೀಲ್‍ಡೌನ್ ; 130 ಮಂದಿಗೆ ಸೋಂಕು

ಹಿಮತ್ ಸಿಂಗ್ ಕ ಸೀಲ್‍ಡೌನ್ ; 130 ಮಂದಿಗೆ ಸೋಂಕು 

ಹಾಸನ: ನಗರದ ಕೈಗಾರಿಕಾ ಪ್ರದೇಶದಲ್ಲಿರುವ ಪ್ರತಿಷ್ಠಿತ ಕಾರ್ಖಾನೆಗಳಲ್ಲಿ ಒಂದಾಗಿರುವ ಹಿಮತ್ ಸಿಂಗ್ ಕ ಕಾರ್ಖಾನೆಯಲ್ಲಿ ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಇಡೀ ಪ್ಲಾಂಟ್ ನನ್ನು ಸೀಲ್ ಡೌನ್ ಮಾಡಲಾಗಿದೆ.
ಶನಿವಾರ ಕಾರ್ಖಾನೆಯ ಸುಮಾರು 60 ಮಂದಿ ನೌಕರರಿಗೆ ಕೊರೊನಾ ಪಾಸಿಟಿವ್ ಇರುವುದು ದೃಢಪಟ್ಟಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳು ಭಾನುವಾರ ಕಾರ್ಖಾನೆಗೆ ಖುದ್ದು ಭೇಟಿ ನೀಡಿ ಪರಿಶೀಲಿಸಿದರು. 
ಈ ವೇಳೆ ಸುಮಾರು 500 ಕಾರ್ಮಿಕರನ್ನು ರ್ಯಾಪಿಡ್ ಟೆಸ್ಟ್ ಗೆ ಒಳ ಪಡಿಸಿದಾಗ ಬರೋಬ್ಬರು 130 ಮಂದಿಗೆ ಪಾಸಿಟಿವ್ ಇರುವುದು ಖಚಿತವಾಗಿದೆ. ಕೆಲವರನ್ನು ಧರ್ಮಸ್ಥಳ ಆಯುರ್ವೇದ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದರೆ ಉಳಿದವರಿಗೆ ಅಲ್ಲೇ ಚಿಕಿತ್ಸೆ ನೀಡಿ ಮುಂಜಾಗ್ರತೆ ವಹಿಸುವಂತೆ ಕಾರ್ಖಾನೆ ಆಡಳಿತ ಮಂಡಳಿಗೆ ಕಟ್ಟು ನಿಟ್ಟಿನ ಸೂಚನೆ ನೀಡಲಾಗಿದೆ. 
ಇನ್ನೂ 2 ಸಾವಿರಕ್ಕೂ ಅಧಿಕ ಕಾರ್ಮಿಕ ಪರೀಕ್ಷೆ ಬಾಕಿಯಿದ್ದು, ಇನ್ನೆಷ್ಟು ಮಂದಿಗೆ ಪಾಸಿಟಿವ್ ವಕ್ಕರಿಸಿದೆಯೋ ಎಂಬ ದೊಡ್ಡ ಆತಂಕ ಮನೆ ಮಾಡಿದೆ.
ಈ ಸಂಬಂಧ ಜನಮಿತ್ರ ನೊಂದಿಗೆ ಮಾತನಾಡಿದ ಡಿಹೆಚ್‍ಒ ಡಾ. ಕೆ.ಎಂ.ಸತೀಶ್ ಕುಮಾರ್, ಹೊರಗಿನಿಂದ ಬಂದವರಿಂದಲೇ ಸೋಂಕು ಹರಡಿದೆ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ ಆಡಳಿತ ಮಂಡಳಿ ಎಲ್ಲಾ ಕಾರ್ಮಿಕರ ಹಿತರಕ್ಷಣೆಗೆ ಮುಂದಾಗುವಂತೆ ಸೂಚಿಸಿದ್ದಾರೆ.
ಇದಕ್ಕೆ ಯಾರು ಹೊಣೆ:
ಆಡಳಿತ ಮಂಡಳಿ ಬೇಜವಾಬ್ದಾರಿತನದಿಂದಲೇ ಕಾರ್ಮಿಕರಿಗೆ ಸಂಕಷ್ಟ ಎದುರಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಲಾಕ್‍ಡೌನ್ ಸಂದರ್ಭದಲ್ಲೂ ಕದ್ದುಮುಚ್ಚಿ ಕಾರ್ಮಿಕರನ್ನು ಗುಂಪು ಗುಂಪಾಗಿ ಕರೆತಂದು ದುಡಿಸಿಕೊಂಡಿದ್ದೇ ಇದಕ್ಕೆ ಕಾರಣ ಎಂದು ಹೇಳಲಾಗುತ್ತಿದೆ. ಈ ವಿಚಾರದಲ್ಲಿ ಕಾರ್ಮಿಕ ಇಲಾಖೆ ಹಾಗೂ ಜಿಲ್ಲಾಡಳಿತದ ಸೂಚನೆ ಉಲ್ಲಂಘಿಸಿದ್ದೇ ಕಾರ್ಮಿಕರು ತೊಂದರೆ ಸಿಲುಕಲು ಕಾರಣವಾಗಿದೆ.ಈ ಹಿನ್ನೆಲೆಯಲ್ಲಿ ಸೋಂಕಿತ ಕಾರ್ಮಿಕರಿಗೆ ಕಂಪನಿಯಲ್ಲೇ ಕೋವಿಡ್ ಕೇರ್ ಸೆಂಟರ್ ತೆರೆಯಲು ಸೂಚನೆ ನೀಡಿರುವ ಜಿಲ್ಲಾಡಳಿತ, ತಾವೇ ಚಿಕಿತ್ಸೆ ಹೊಣೆ ಹೊರಬೇಕು ಎಂದು ಆದೇಶಿಸಿದೆ.

Post a Comment

0 Comments