ಹಾಸನ ಅ.15(ಕರ್ನಾಟಕ ವಾರ್ತೆ): ಜಿಲ್ಲೆಯಲ್ಲಿ ರಸ್ತೆ ಅಪಘಾತಗಳನ್ನು ತಗ್ಗಿಸಲು ಬ್ಲಾಕ್ ಸ್ಪಾಟ್ ಗಳ ಗುರುತಿಸುವಿಕೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಮಾಡುವಂತೆ ಜಿಲ್ಲಾಧಿಕಾರಿಯವರು ಲೋಕೋಪಯೋಗಿ ಇಲಾಖೆ,ರಾಷ್ಟ್ರೀಯ ಹೆದ್ದಾರಿ ಮತ್ತು ಪೊಲೀಸ್ ಇಲಾಖೆ, ಜಿಲ್ಲಾ ಪಂಚಾಯಿತಿ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಆರ್ .ಗಿರೀಶ್ ಸೂಚನೆ ನೀಡಿದ್ದಾರೆ.
ಜಿಲ್ಲಾಧಿಕಾರಿ ಕಚೇರಿ ಮುಂದೆ ನಡೆದ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು ಈಗಾಗಲೇ ಗುರುತಿಸಿರುವ 64 ಬ್ಲಾಕ್ ಸ್ಪಾಟ್ ಗಳನ್ನು ಸರಿಪಡಿಸಲು ಮಾಡಿರುವ ಕ್ರಮಗಳ ಬಗ್ಗೆ ಇಲಾಖಾವಾರು ವಿವರ ಪಡೆದರು.
ಪ್ರತಿ ನಗರ ಸ್ಥಳೀಯ ಸಂಸ್ಥೆ ವ್ಯಾಪ್ತಿ ಹಾಗೂ ಗ್ರಾಮ ಪಂಚಾಯಿತಿ ಹಂತದವರೆಗೂ ಇಂತಹ ಬ್ಲಾಕ್ ಸ್ಪಾಟ್ ಗಳನ್ನು ಗುರುತಿಸಿ ಸರಿಪಡಿಸಬೇಕು ಅಪಘಾತಗಳನ್ನು ನಿಯಂತ್ರಿಸಲು ಎಲ್ಲಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅವರು ಹೇಳಿದರು.
ರಸ್ತೆಗಳನ್ನು ಸರಿಪಡಿಸಲು ಹಾಗೂ ಸೂಚನಾ ಫಲಕಗಳನ್ನು ಅಳವಡಿಸಲು ಲಭ್ಯವಿರುವ ಇಲಾಖೆ ಅನುದಾನವನ್ನು ಬಳಸಬೇಕು ಹೆಚ್ಚುವರಿ ಅಗತ್ಯವಿದ್ದರೆ ರಸ್ತೆ ಸುರಕ್ಷತಾ ನಿಧಿಗೂ ಪ್ರಸ್ತಾವನೆ ಸಲ್ಲಿಸುವಂತೆ ಅವರು ಹೇಳಿದರು.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ರಾಷ್ಟ್ರೀಯ ಹೆದ್ದಾರಿ ಇಲಾಖೆ ವತಿಯಿಂದ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು ಹಾಗೂ ಬ್ಲಾಕ್ ಸ್ಪಾಟ್ ಪ್ರದೇಶಗಳನ್ನು ಸರಿಪಡಿಸಬೇಕು ಎಂದು ಜಿಲ್ಲಾಧಿಕಾರಿ ಅವರು ಸೂಚನೆ ನೀಡಿದರು.
64 ಬ್ಲಾಕ್ ಸ್ಪಾಟ್ ಗಳನ್ನು ಸರಿ ಪಡಿಸಿರುವ ಬಗ್ಗೆ ಸಾರಿಗೆ ಇಲಾಖೆ ,ಪೊಲೀಸ್ ಇಲಾಖೆ ಹಾಗೂ ರಾಜ್ಯ ರಸ್ತೆ ಸಾರಿಗೆ ಇಲಾಖೆ ಅಧಿಕಾರಿಗಳು ಸ್ಥಳ ಪರಿಶೀಲಿಸಿ ವರದಿ ನೀಡುವಂತೆ ಅವರು ತಿಳಿಸಿದರು.
ಈಗಾಗಲೇ ಬ್ಲಾಕ್ ಸ್ಪಾಟ್ ಗಳಲ್ಲಿ ಕಳೆದ 5 ತಿಂಗಳಿನಲ್ಲಿ ಆಗಿರುವ ಅಪಘಾತಗಳ ಬಗ್ಗೆ ಪರಿಶೀಲನಾ ವರದಿ ನೀಡುವಂತೆ ಅವರು ಪೊಲೀಸ್ ಇಲಾಖೆಗೆ ತಿಳಿಸಿದರು.
ಬಣ್ಣ ಬಳಿಯದೆ ಇರುವ ಉಬ್ಬುಗಳು ಮತ್ತು ಶೋಲ್ಡರ್ ಗಳ ಬಗ್ಗೆ ಲೋಕೋಪಯೋಗಿ ಇಲಾಖೆ ಶೀಘ್ರ ಕ್ರಮ ವಹಿಸಬೇಕು ಎಂದ ಜಿಲ್ಲಾಧಿಕಾರಿಯವರು ಸಂತೆಪೇಟೆ ಬಳಿಯ ವೃತ್ತದಲ್ಲಿನ ರಸ್ತೆಯನ್ನು ಶೀಘ್ರ ಸರಿಪಡಿಸುವಂತೆ ಅವರು ಹೇಳಿದರು.
ರಸ್ತೆಗಳ ನಿರ್ಮಾಣ ಹಾಗೂ ದುರಸ್ತಿ ಕಾರ್ಯಗಳನ್ನು ಸಂಬಂಧಪಟ್ಟ ಇಲಾಖೆ ಸಂಸ್ಥೆಗಳು ಬೇಗ ಪೂರ್ಣಗೊಳಿಸಬೇಕು ಇದರಿಂದ ಸಾರ್ವಜನಿಕರಿಗೆ ಇಲಾಖೆಗಳ ಕಾರ್ಯಪರತೆ ಬಗ್ಗೆಯೂ ವಿಶ್ವಾಸ ಮೂಡುತ್ತದೆ ಅಲ್ಲದೆ ಅನುಕೂಲವಾಗಲಿದೆ ಎಂದ ಜಿಲ್ಲಾಧಿಕಾರಿಯವರು ಹಾಸನ ನಗರ ಹಾಗೂ ಹೊರ ವಲಯದ ಕಾಮಗಾರಿಗಳನ್ನು ತುರ್ತಾಗಿ ಪೂರ್ಣಗೊಳಿಸಬೇಕು ಎಂದರು.
ರಸ್ತೆ ಸುರಕ್ಷತಾ ಜಾಗೃತಿ ಅಭಿಯಾನವನ್ನು ತೀವ್ರ ಸ್ವರೂಪದಲ್ಲಿ ಮಾಡಿ ಗ್ರಾಮೀಣ ಪ್ರದೇಶಗಳಲ್ಲಿ ಅರಿವು ಮೂಡಿಸಿ ಶಾಲಾ ವಾಹನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳನ್ನು ಕೊಂಡೊಯ್ಯುವುದನ್ನು ಸಂಪೂರ್ಣ ನಿಯಂತ್ರಿಸಿ ಎಂದರು.
ಸರಕು ಸಾಗಾಣಿಕೆ ವಾಹನದಲ್ಲಿ ಜನರನ್ನು ಸಾಗಿಸುವುದನ್ನು ಸಂಪೂರ್ಣ ನಿಯಂತ್ರಿಸಬೇಕು.ಕೈಗಾರಿಕೆಗಳು ತಮ್ಮ ಕಾರ್ಮಿಕರಿಗೆ ಈ ಬಗ್ಗೆ ಅರಿವು ಮೂಡಿಸಬೇಕು. ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್ ಗಳ ನೆರವನ್ನು ಪಡೆಯಬೇಕು ಎಂದು ಜಿಲ್ಲಾಧಿಕಾರಿ ಸೂಚನೆ ನೀಡಿದರು.
ಅಪರ ಪೊಲೀಸ್ ವರಿಷ್ಠಾಧಿಕಾರಿ ಬಿ.ಎನ್ ನಂದಿನಿ ಅವರು ಮಾತನಾಡಿ ಬ್ಲಾಕ್ ಸ್ಪಾಟ್ ಗಳು ಹಾಗೂ ಇಲಾಖಾವಾರು ಆಗಬೇಕಿರುವ ಸುಧಾರಣೆಗಳ ಬಗ್ಗೆ ಸಭೆಗೆ ಮಾಹಿತಿ ನೀಡಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ.ಎ.ಪರಮೇಶ್ ಅವರು ಮಾತನಾಡಿ ರಸ್ತೆ ಸುರಕ್ಷತೆ ಬಗ್ಗೆ ಹೆಚ್ಚು ಅರಿವು ಮೂಡಿಸಿ. ಗ್ರಾಮ ಮಟ್ಟದಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಿ ಎಂದು ತಿಳಿಸಿದರು.
ಪ್ರಾದೇಶಿಕ ಸಾರಿಗೆ ಅಧಿಕಾರಿ ಅಶೋಕ್ ಅವರು ಈವರೆಗೆ ಆಗಿರುವ ಪ್ರಗತಿ, ಬ್ಲಾಕ್ ಸ್ಪಾಟ್ಟ್ ಗಳ ಗುರುತಿಸು ವಿಕೆ ಹಾಗೂ ಜಾಗೃತಿ ಚಟುವಟಿಕೆಗಳ ಬಗ್ಗೆ ವಿವರಿಸಿದರು.
ವಿವಿಧ ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.
0 Comments