ಸೋಂಕಿತರ ಸಮಪರ್ಕಿತರನ್ನು ಪತ್ತೆಹಚ್ಚಲು ನಿಗಾವಹಿಸಿ: ಆರ್. ಗಿರೀಶ್

ಸೋಂಕಿತರ ಸಮಪರ್ಕಿತರನ್ನು ಪತ್ತೆಹಚ್ಚಲು ನಿಗಾವಹಿಸಿ: ಆರ್. ಗಿರೀಶ್
ಹಾಸನ,ಆ.29(ಕರ್ನಾಟಕ ವಾರ್ತೆ):-  ಜಿಲ್ಲೆಯಲ್ಲಿ ಕೋವಿಡ್-19 ಸೋಂಕು ವ್ಯಾಪಕವಾಗಿ ಹೆಚ್ಚಾಗುತ್ತಿದ್ದು, ಸೋಂಕಿತರ ಪ್ರಥಮ ಹಾಗೂ ದ್ವಿತೀಯ ಸಂಪರ್ಕಿತರನ್ನು ಪರಿಣಾಮಕಾರಿಯಾಗಿ ಪತ್ತೆಹಚ್ಚಲು ಅಧಿಕಾರಿಗಳು ನಿಗಾ ವಹಿಸಬೇಕು ಎಂದು ಜಿಲ್ಲಾಧಿಕಾರಿ ಆರ್. ಗಿರೀಶ್ ತಿಳಿಸಿದ್ದಾರೆ.
 ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ಎಲ್ಲಾ ತಾಲ್ಲೂಕುಮಟ್ಟದ ಅಧಿಕಾರಿಗಳೊಂದಿಗೆ ವೀಡಿಯೋ ಸಂವಾದ ನಡೆಸಿ ಮಾತನಾಡಿದ ಅವರು ಕೋವಿಡ್-19 ಸೋಂಕು ದೃಢಪಟ್ಟ ವ್ಯಕ್ತಿಯ ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ ಪ್ರಥಮ ಹಾಗೂ ದ್ವಿತೀಯ ಸಂಪರ್ಕಿತರನ್ನು ಪಟ್ಟಿ ಮಾಡಿ ತಪಾಸಣೆಗೆ ಒಳಪಡಿಸಬೇಕು ಎಂದರು.
 ಪ್ರಥಮ ಸಂಪರ್ಕಿತರಿಗಿಂತ ದ್ವಿತೀಯ ಸಂಪರ್ಕಿತರ ಸಂಖ್ಯೆ ಹೆಚ್ಚಾಗಿರಬೇಕು. ಕನಿಷ್ಟಪಕ್ಷ ಸೋಂಕಿತರಿಗೆ 6 ಪ್ರಥಮ ಹಾಗೂ 6 ದ್ವಿತೀಯ ಸಂಪರ್ಕಿತರು ಇರಲೇಬೇಕು. ಈ ನಿಟ್ಟಿನಲ್ಲಿ ಆರೋಗ್ಯ ಸಿಬ್ಬಂದಿಗಳು ಹಾಗೂ ಅಧಿಕಾರಿಗಳು ತಾಲ್ಲೂಕು ಆಡಳಿತದ ಸಹಕಾರದೊಂದಿಗೆ ಹೆಚ್ಚು ಹೆಚ್ಚು ಸಂಪರ್ಕಿತರನ್ನು ಪತ್ತೆಮಾಡಬೇಕು ಎಂದು ಅವರು ಹೇಳಿದರು.
 ಅಧಿಕಾರಿಗಳು ಕೇವಲ ಗುರಿಯನ್ನು ಸಂಪೂರ್ಣಗೊಳಿಸುವ ಸಲುವಾಗಿ ಮಾತ್ರ ಕಾರ್ಯ ನಿರ್ವಹಿಸದೆ, ಜಿಲ್ಲೆಯಲ್ಲಿ ಕೊರೋನಾ ಸೋಂಕನ್ನು ನಿಯಂತ್ರಣಕ್ಕೆ ತರಲು ಸಂಪೂರ್ಣ ಪ್ರಯತ್ನ ಮಾಡಬೇಕು ಎಂದು ಜಿಲ್ಲಾಧಿಕಾರಿ ಅಧಿಕಾರಿಗಳಿಗೆ ಸೂಚಿಸಿದರು.
 ಸಂಪರ್ಕಿತರನ್ನು ಪತ್ತೆಹಚ್ಚಲು ಹೆಚ್ಚು ಸಿಬ್ಬಂದಿಗಳನ್ನು ಬಳಸಿಕೊಂಡು ಕಂಟೈನ್‍ಮೆಂಟ್ ವಲಯಗಳಲ್ಲಿ ಶೀತ, ಜ್ವರ ಹಾಗೂ ಉಸಿರಾಟದ ತೊಂದರೆಗಳಂತಹ ರೋಗ ಲಕ್ಷಣಗಳು ಇರುವವರನ್ನು ಗುರುತಿಸಿ ಪರೀಕ್ಷೆಗೆ ಒಳಪಡಿಸಿ ಎಂದರು.
 ಮುಂದಿನ ದಿನಗಳಲ್ಲಿ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಐ.ಸಿ.ಯು ಹಾಸಿಗೆಗಳ ಕೊರತೆ ಉಂಟಾಗುವ ಸಾಧ್ಯತೆ ಇದ್ದು, ಡೆಡಿಕೇಟೆಡ್ ಕೋವಿಡ್ ಆರೋಗ್ಯ ಕೇಂದ್ರ್ರಗಳಲ್ಲಿಯೇ ಸೋಂಕಿತರನ್ನು ತಪಾಸಣೆ ಮಾಡುವ ಎಲ್ಲಾ ವ್ಯವಸ್ಥೆಗಳನ್ನು ಮಾಡಿಕೊಳ್ಳಬೇಕು. ಈ ನಿಟ್ಟಿನಲ್ಲಿ ಎಲ್ಲಾ ತಾಲ್ಲೂಕುಗಳಿಗೆ ಅತ್ಯಗತ್ಯವಿರುವ ವೈದ್ಯಕೀಯ ಉಪಕರಣಗಳನ್ನು ಖರೀದಿಸಿ ಎಂದು ಆರ್. ಗಿರೀಶ್ ತಿಳಿಸಿದರು.
 ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ.ಎ ಪರಮೇಶ್ ಅವರು ಮಾತನಾಡಿ ಕೋವಿಡ್ ಸೋಂಕಿತರ ಸಂಪರ್ಕಿತರನ್ನು ಪತ್ತೆಹಚ್ಚುವಲ್ಲಿ ಆಯಾ ತಾಲ್ಲೂಕಿನ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಪಂಚಾಯಿತಿ ಅಧಿಕಾರಿಗಳು ಹೆಚ್ಚು ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಬೇಕು ಎಂದರು.
 ಜಿಲ್ಲಾಶಸ್ತ್ರ ಚಿಕಿತ್ಸಕರಾದ ಡಾ|| ಕೃಷ್ಣಮೂರ್ತಿ ಅವರು ಡೆಡಿಕೇಟೆಡ್ ಕೋವಿಡ್ ಆರೋಗ್ಯ ಕೇಂದ್ರಗಳಲ್ಲಿ ಅನುಸರಿಸಬೇಕಾದ ಅಗತ್ಯ ಕ್ರಮಗಳು, ತಪಾಸಣಾ ವಿಧಾನ ಹಾಗೂ ಇತರೆ ಮುಖ್ಯ ವಿಷಯಗಳನ್ನು ವಿವರಿಸಿದರು.
 ಅಪರ ಜಿಲ್ಲಾಧಿಕಾರಿ ಕವಿತ ರಾಜಾರಾಂ, ಉಪವಿಭಾಗಾಧಿಕಾರಿ ಡಾ|| ನವೀನ್ ಭಟ್, ಪ್ರಬಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಕಾಂತರಾಜು, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಾದ ಬಿ.ಎ ಜಗದೀಶ್ ಹಾಗೂ ಮತ್ತಿತರರು ಸಭೆಯಲ್ಲಿ ಹಾಜರಿದ್ದರು.

Post a Comment

0 Comments