ಹೆಚ್ಚಿನ ಸಂಖ್ಯೆಯಲ್ಲಿ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಬೇಕು ಜಿಲ್ಲಾಧಿಕಾರಿ ಮನವಿ
ಹಾಸನ,ಆ.27(ಕರ್ನಾಟಕ ವಾರ್ತೆ):- ಜಿಲ್ಲೆಯಲ್ಲಿ ಹಾಗೂ ರಾಜ್ಯದಲ್ಲಿ ಕೋವಿಡ್-19 ಬಹಳ ವೇಗವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ಎಲ್ಲರೂ ಒಟ್ಟಾಗಿ ಕೊರೋನಾ ವೈರಸ್ ವಿರುದ್ಧ ಹೋರಾಡಬೇಕಾಗಿದೆ ಎಂದು ಜಿಲ್ಲಾಧಿಕಾರಿ ಆರ್. ಗಿರೀಶ್ ಅವರು ಕರೆ ನೀಡಿದ್ದಾರೆ.
ಸಾರ್ವಜನಿಕರು ಯಾವುದೇ ವಿಳಂಬ ಮಾಡದೇ ಕೊರೋನಾ ಲಕ್ಷಣಗಳು ಕಂಡು ಬಂದಲ್ಲಿ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಬೇಕು. ಇತ್ತೀಚಿನ ದಿನಗಳಲ್ಲಿ ಕೊರೋನಾ ಲಕ್ಷಣಗಳು ಕಂಡು ಬಾರದಿದ್ದರೂ ಸಾವಿಗೆ ತುತ್ತಾಗುತ್ತಿದ್ದಾರೆ. ಆಮ್ಲಜನಕ ನಿಗಧಿತ ಪ್ರಮಾಣಕ್ಕಿಂತಲೂ ಕಡಿಮೆಯಾದರೂ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ಅವರು ಹೇಳಿದರು.
ಸೋಂಕಿತರ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕದಲ್ಲಿರುವವರು ತಪ್ಪದೇ ಕೊರೋನಾ ಪರೀಕ್ಷೆಗೆ ಒಳಗಾಗಬೇಕು. ಕೋವಿಡ್ ಪರೀಕ್ಷೆ ಮಾಡಿದಾಗ ತಕ್ಷಣ ಅಥವಾ ಒಂದು ದಿನದ ಒಳಗೆ ವರದಿ ಬರುತ್ತದೆ ಆದ್ದರಿಂದ ಸಾವಜನಿಕರು ಸಹರಿಸಬೇಕೆಂದು ತಿಳಿಸಿದರು.
ಕೋವಿಡ್ ಪರೀಕ್ಷೆಗೊಳಗಾದವರಲ್ಲಿ ಸೋಂಕು ದೃಢಪಟ್ಟಿದ್ದು, ಅಂತಹ ವ್ಯಕ್ತಿಗಳಲ್ಲಿ ಯಾವುದೇ ರೀತಿಯ ಕೊರೋನಾ ಲಕ್ಷಣಗಳು ಕಾಣದಿದ್ದರೆ ಅಂತಹವರಿಗೆ ಮನೆಯಲ್ಲಿಯೇ ಕ್ವಾರಂಟೈನ್ ಮೂಲಕ ಚಿಕಿತ್ಸೆ ನೀಡಲಾಗುವುದು ಎಂದು ಹೇಳಿದರು.
ರೋಗ ಲಕ್ಷಣಗಳು ಇದ್ದರೂ ಅಥವಾ ಇಲ್ಲದಿದ್ದರೂ ಪರೀಕ್ಷೆಗೆ ಒಳಗಾಗುವುದರಿಂದ ಸೋಂಕು ಇರುವುದು ದೃಢ ಪಟ್ಟರೆ ಪ್ರಾಥಮಿಕ ಹಂತದಲ್ಲಿಯೇ ಚಿಕಿತ್ಸೆ ನೀಡಬಹುದು. ಕೊರೋನಾ ಪರೀಕ್ಷೆಗೆ ತಾಲ್ಲೂಕು ಆರೋಗ್ಯ ಕೇಂದ್ರವನ್ನು ಸಂಪರ್ಕಿಸಬಹುದು ಎಂದು ಹೇಳಿದ್ದಾರೆ.
ಕೋವಿಡ್-19 ಪರೀಕ್ಷೆಗಳು ಹಾಗೂ ಸಲಹೆಗಳಿಗಾಗಿ ಸಹಾಯವಾಣಿ ತೆರೆಯಲಾಗಿದ್ದು, ಸಾರ್ವಜನಿಕರು 08172-246575 ಸಂಖ್ಯೆಗೆ ಕರೆ ಮಾಡುವಂತೆ ಜಿಲ್ಲಾಧಿಕಾರಿ ಕೋರಿದ್ದಾರೆ.
ಪ್ರತಿಯೊಬ್ಬ ಸಾರ್ವಜನಿಕರೂ ಕೊರೋನಾ ಪರೀಕ್ಷೆ ಮಾಡಿಸಿಕೊಳ್ಳುವ ಮೂಲಕ ಕೋವಿಡ್-19 ಸಂಪೂರ್ಣ ನಿಯಂತ್ರಣಕ್ಕೆ ಜಿಲ್ಲಾಡಳಿತದೊಂದಿಗೆ ಸಹಕರಿಸುವಂತೆ ಜಿಲ್ಲಾಧಿಕಾರಿ ಆರ್. ಗಿರೀಶ್ ಮನವಿ ಮಾಡಿದ್ದಾರೆ.
0 Comments