ರೈತರಿಗಾಗಿ ಅಣೆಕಟ್ಟೆಯಿಂದ ನೀರು ಹರಿಸಲು ತೀರ್ಮಾನ: ಗೋಪಾಲಯ್ಯ

ರೈತರಿಗಾಗಿ ಅಣೆಕಟ್ಟೆಯಿಂದ ನೀರು ಹರಿಸಲು ತೀರ್ಮಾನ: ಗೋಪಾಲಯ್ಯ

ಹಾಸನ: ಹೇಮಾವತಿ ಅಣೆಕಟ್ಟೆ ತುಂಬುತ್ತಿದ್ದು ರೈತರಿಗೆ ಅನುಕೂಲವಾಗುವಂತೆ ಬಲದಂಡೆ ನಾಲೆಗೆ ನೀರು ಬಿಡಲು ತೀರ್ಮಾನಿಸಲಾಗಿದೆ ಎಂದು ಸಚಿವ ಗೋಪಾಲಯ್ಯ ಹೇಳಿದ್ದಾರೆ.

ಹಾಸನದ ಹೊಳೆನರಸೀಪುರದಲ್ಲಿ ಅಧಿಕಾರಿಗಳ ಜೊತೆ ಸಭೆ ನಡೆಸಲು ಆಗಮಿಸಿದ ವೇಳೆ ಮಾತನಾಡಿದ ಸಚಿವರು, ಜಿಲ್ಲೆಯಲ್ಲಿ ಕೋವಿಡ್ ಪರಿಸ್ಥಿತಿ, ಬಲದಂಡೆ ನಾಲೆಗೆ ನೀರು ಹರಿಸುವುದು ಸೇರಿದಂತೆ ಹಲವು ವಿಷ್ಯಗಳ ಬಗ್ಗೆ ಚರ್ಚಿಸಲು ಬಂದಿದ್ದೇನೆ. ಹಾಸನದಲ್ಲಿ ಪದೇ ಪದೇ ಚಾಕುಬಿರಿತದಂತ ಪ್ರಕರಣ ಪುನರಾವರ್ತನೆ ಆಗುತ್ತಿರುವ ಹಿನ್ನೆಲೆಯಲ್ಲಿ ಎಸ್‍ಪಿ ಸೇರಿದಂತೆ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದೇನೆ ಎಂದರು.

ನಿಮ್ಮ ಜೊತೆ ಸರ್ಕಾರ ಇರಲಿದೆ. ನಿರ್ಭಯವಾಗಿ ಕೆಲಸ ಮಾಡಿ. ರಾಜಕಾರಣಿಗಳು ಯಾರೂ ಒತ್ತಡ ಹಾಕುವ ಪ್ರಶ್ನೆ ಇಲ್ಲ. ಕಾನೂನು ಪ್ರಕಾರ ಏನು ಕೆಲಸ ಮಾಡಬೇಕೋ ಮಾಡಿ ಎಂದು ಅಧಿಕಾರಿಗಳಿಗೆ ಹೇಳಿದ್ದೇನೆ. ಪಿಎಸ್‍ಐ ಆತ್ಮಹತ್ಯೆ ಪ್ರಕರಣ ಎಸ್‍ಪಿ ನೇತೃತ್ವದಲ್ಲಿ ತನಿಖೆಯಾಗುತ್ತಿದ್ದು, ತನಿಖೆ ನಂತರ ಅದರ ಬಗ್ಗೆ ಮಾತನಾಡುತ್ತೇನೆ ಎಂದು ತಿಳಿಸಿದರು.

ಬಿಜೆಪಿ ಕಾರ್ಯಕರ್ತರ ಜೊತೆ ಸಚಿವ ಚರ್ಚೆ:
ಹೊಳೆನರಸೀಪುರದಲ್ಲಿ ಅಧಿಕಾರಿಗಳ ಜೊತೆ ಸಭೆ ನಡೆಸುವ ಮುನ್ನ ಸಚಿವ ಗೋಪಾಲಯ್ಯ ತಾಲೂಕಿನ ಬಿಜೆಪಿ ಕಾರ್ಯಕರ್ತರ ಜೊತೆ ಅರ್ಧಗಂಟೆಗೂ ಹೆಚ್ಚು ಕಾಲ ಮಾತುಕತೆ ನಡೆಸಿದ್ದು ಕುತೂಹಲಕ್ಕೆ ಕಾರಣವಾಗಿತ್ತು. ರೇವಣ್ಣ ಸ್ವಕ್ಷೇತ್ರದಲ್ಲಿ ಬಿಜೆಪಿ ಬಲಪಡಿಸಲು ಚರ್ಚೆ ನಡೆಸಲಾಯ್ತು ಎಂಬ ಮಾತು ಕೇಳಿ ಬಂದ ಹಿನ್ನೆಲೆಯಲ್ಲಿ ಸ್ಪಷ್ಟನೆ ನೀಡಿದ ಸಚಿವ ಗೋಪಾಲಯ್ಯ, ಮುಂದಿನ ವಾರ ಹೊಳೆನರಸೀಪುರದಲ್ಲಿ ಸಭೆ ಮಾಡಬೇಕು ಅಂತಿದ್ದಾರೆ. ಆಗಲೂ ಬರುತ್ತೇನೆ. ಪಕ್ಷದ ಕಾರ್ಯಕರ್ತರಿಗೆ ನೈತಿಕವಾಗಿ ಧೈರ್ಯ ತುಂಬುವ ಕೆಲಸ ಮಾಡಿದ್ದೇನೆ ಎಂದರು.

ಜಿಲ್ಲೆಯ ಅಭಿವೃದ್ಧಿಗೆ ಉಸ್ತುವಾರಿ ಸಚಿವನಾಗಿ ಬಂದಿದೇನೆ. ಅದರ ಜೊತೆಯಲ್ಲೇ ನಾನು ಎಲ್ಲಿಗೆ ಹೋದರೂ ಪಕ್ಷದ ಕಚೇರಿಗೆ ಹೋಗಿ ಅಲ್ಲಿಯ ಮುಖಂಡರ ಜೊತೆ ಭೇಟಿ ಮಾಡುತ್ತೇನೆ. ಅದೇ ರೀತಿ ಇಲ್ಲಿಯೂ ಪಕ್ಷದ ಮುಖಂಡರ ಜೊತೆ ಮಾತನಾಡಿದ್ದೇನೆ. ಮುಂದಿನವಾರ ಹೊಳೆನರಸೀಪುರ, ಅರಕಲಗೂಡಿನಲ್ಲಿ ಪದಾದಿಕಾರಿಗಳ ಜೊತೆ ಕುಳಿತು ಮಾತನಾಡುತ್ತೇನೆ ಎಂದು ಹೇಳಿದ್ರು.

Post a Comment

0 Comments