ವರ ಮಹಾಲಕ್ಷ್ಮಿ ಹಬ್ಬ ಹಿನ್ನೆಲೆಕೊರೊನಾ ನಡುವೆಯೂ ಜಿಲ್ಲಾದ್ಯಂತ ಖರೀದಿ ಜೋರು: ಬೆಲೆ ದುಬಾರಿ

ವರ ಮಹಾಲಕ್ಷ್ಮಿ ಹಬ್ಬ ಹಿನ್ನೆಲೆ
ಕೊರೊನಾ ನಡುವೆಯೂ ಜಿಲ್ಲಾದ್ಯಂತ ಖರೀದಿ ಜೋರು: ಬೆಲೆ ದುಬಾರಿ

ಹಾಸನ: ಜಿಲ್ಲೆಯಲ್ಲಿ ಕೊರೊನಾ ಆತಂಕದ ನಡುವೆಯೂ ಶ್ರಾವಣ ಮಾಸದ ಎರಡನೇ ಶುಕ್ರವಾರ ಆಚರಿಸುವ ವರಮಹಾಲಕ್ಷ್ಮಿಹಬ್ಬದ ಹಿನ್ನೆಲೆಯಲ್ಲಿ ಹಬ್ಬದ ಬೇಕಾದ ವಸ್ತುಗಳ ಖರೀದಿ ಭರಾಟೆ ಎಲ್ಲೆಡೆ ಜೋರಾಗಿತ್ತು. ವರ ಮಹಾಲಕ್ಷ್ಮಿ ಪೂಜೆಗೆ ಬೇಕಾದ ಅಗತ್ಯ ವಸ್ತುಗಳ ಖರೀದಿಗೆ ಸಾರ್ವಜನಿಕರು ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದರು.
ಕೊರೊನಾ ಸೋಂಕು ಹರಡುವ ಭೀತಿ ಇದ್ದರೂ, ಹೂ, ಹಣ್ಣು ಹಾಗೂ ತರಕಾರಿ ಬೆಲೆ ಗಗನಕ್ಕೇರಿತ್ತು. ಆದರೂ ಖರೀದಿಗೆ ಹಿಂದು ಮುಂದು ನೋಡದ ಗ್ರಾಹಕರು ಬೇಕಾದ ವಸ್ತುಗಳ ಖರೀದಿಗೆ ಮುಗಿ ಬಿದ್ದಿದ್ದರು.
ಇದರಿಂದಾಗಿ ಹಾಸನದ ಕಟ್ಟಿನ ಕೆರೆ ಮಾರುಕಟ್ಟೆ, ಕಸ್ತೂರ ಬಾ ರಸ್ತೆ, ಮಹಾವೀರ ವೃತ್ತ, ಸ್ಲೇಟರ್ಸ್ ಹಾಲ್, ರೈಲ್ವೆ ನಿಲ್ದಾಣ ಸಮೀಪದ ಮಾರುಕಟ್ಟೆಗಳಲ್ಲಿ ಜನ ಜಂಗುಳಿಯೇ ನೆರೆದಿತ್ತು. ನಾ ಮುಂದು ತಾ ಮುಂದು ಎಂಬಂತೆ ಹಬ್ಬಕ್ಕೆ ಬೇಕಾದ ವಸ್ತು, ತಿಂಡಿ ತಿನಿಸು ಖರೀದಿಗೆ ಜನರು ಜಮಾಯಿಸಿದ್ದರು. 
ಗಗನಕ್ಕೇರಿದ ಬೆಲೆ:
ವರಮಹಾಲಕ್ಷ್ಮಿ ಹಬ್ಬದ ಅಂಗವಾಗಿ ವಿವಿಧ ಸಾಮಗ್ರಿ ಖರೀದಿಗೆ ಬಂದಿದ್ದ ಜನರಿಗೆ ಬೆಲೆ ಏರಿಕೆ ಬಿಸಿ ತಟ್ಟಿತು. ಕಳೆದ ವರ್ಷಕ್ಕೆ ಹೋಲಿಸಿದರೆ ಎಲ್ಲ ಪದಾರ್ಥಗಳ ದರದಲ್ಲಿ ಗಣನೀಯ ಏರಿಕೆ ಕಂಡು ಬಂತು. ಕೊರೊನಾ ಆತಂಕ ಹಿನ್ನೆಲೆಯಲ್ಲಿ ಹೆಚ್ಚು ಮಂದಿ ವ್ಯಾಪಾರಿಗಳು ನಿತ್ಯದ ವ್ಯಾಪಾರ ಕೈ ಚೆಲ್ಲಿದ್ದರಿಂದ ಇರುವ ವಸ್ತುಗಳ ಬೆಲೆ ಹೆಚ್ಚಾಗಿತ್ತು.
ಸೇವಂತಿಗೆ ಚೆಂಡು ಹೂವು, ಮಲ್ಲಿಗೆಗೆ ಒಂದು ಮಾರಿಗೆ 100 ರಿಂದ 150 ರೂ. ವರೆಗೂ ಇತ್ತು. ಅಂತೆಯೇ ದಾಸವಾಳ ಹೂ ಬೆಲೆ 80 ರೂ. ಇತ್ತು. ದೊಡ್ಡ ಗಾತ್ರದ ತಾವರೆ ಹೂ ಜೋಡಿಗೆ 50 ರೂ ಇದ್ದರೆ ಚಿಕ್ಕದಕ್ಕೆ 20 ರೂ. ಇತ್ತು. ಒಂದು ಕೆಜಿ ಬಾಳೆಹಣ್ಣು ಬೆಲೆ 
80 ರೂ. ನಿಂದ 100 ವರೆಗೂ ಇತ್ತು.
ತೆಂಗಿನ ಕಾಯಿ ಒಂದಕ್ಕೆ 30 ರೂ., ಮಾವಿನ ಸೊಪ್ಪು ಒಂದು ಕಟ್ಟಿಗೆ 50 ರೂ., ಬಾಳೆ ಕಂದು ಜೋಡಿಗೆ 50 ರಿಂದ 80 ರೂ., ಕಬ್ಬು ಎರಡಕ್ಕೆ 40 ರೂ., ಸೇಬು 150 ರಿಂದ 200 ರೂ., ದಾಳಿಂಬೆ ದರ 80 ರೂ. ನಿಂದ 100 ರೂ. ಇತ್ತು. ಆದರೂ ಕೂಡ ಹಬ್ಬಕ್ಕೆ ಬೇಕಾದ ವಸ್ತುಗಳ ಖರೀದಿಗೆ ಜನರು ಮುಗಿಬಿದ್ದಿದ್ದ ದೃಶ್ಯ ಸಾಮಾನ್ಯವಾಗಿತ್ತು.
ಸಾಮಾಜಿಕ ಅಂತರ ಮಾಯ:
ವಿಪರ್ಯಾಸ ಎಂದರೆ ಜಿಲ್ಲೆಯಲ್ಲಿ ಜಿಲ್ಲೆಯಲ್ಲಿ ಕೊರೊನಾ ಮಹಾಮಾರಿ ಅಬ್ಬರ ಮಿತಿ ಮೀರಿದ್ದರೂ, ಮಾರುಕಟ್ಟೆಗೆ ಬಂದಿದ್ದ ಬಹುತೇಕ ಜನರು ಸಾಮಾಜಿಕ ಅಂತರವನ್ನೇ ಮರೆತಿದ್ದರು. ಅನೇಕ ಕಡೆಗಳಲ್ಲಿ ಗ್ರಾಹಕರು ಗುಂಪು ಗುಂಪಾಗಿ ನಿಂತು ಬೇಕಾದ ವಸ್ತುಗಳ ಖರೀದಿಯಲ್ಲಿ ಮಗ್ನ ರಾಗಿದ್ದ ದೃಶ್ಯ ಸಾಮಾನ್ಯವಾಗಿತ್ತು.
ಪೊಲೀಸರು ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಎಂದು ಮನವಿ ಮಾಡಿದರೂ, ಇದನ್ನು ಕೇಳಿಸಿಕೊಂಡವರು ಕಡಿಮೆ. ಕೆಲವರು ಮಾರುಕಟ್ಟೆಯೊಳಗೇ ವಾಹನಗಳನ್ನು ತಂದಿದ್ದರಿಂದ ಟ್ರಾಫಿಕ್ ಜಾಂ ಉಂಟಾಗಿತ್ತು. ಬಹುತೇಕರು ಮಾಸ್ಕ್ ಧರಿಸಿದ್ದರಾದರೂ ಸಾಮಾಜಿಕ ಅಂತರ ಪಾಲನೆ ಮಾತ್ರ ಕಣ್ಮರೆಯಾಗಿತ್ತು.

Post a Comment

0 Comments