ಮಳೆ ಹಾನಿ : ಜನರ ಸಂಕಷ್ಟಕ್ಕೆ ತಕ್ಷಣ ಸ್ಪಂದಿಸಲು ಸಚಿವರ ಸೂಚನೆ


ಹಾಸನ: ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಜಿಲ್ಲೆಯಲ್ಲಿ ಉಂಟಾಗಿರು ಮಳೆಹಾನಿ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಅಬಕಾರಿ ಸಚಿವರಾದ ಕೆ.ಗೋಪಾಲಯ್ಯ ಅವರು ಜಿಲ್ಲಾಧಿಕಾರಿ ಕಚೇರಿಯಲ್ಲಿಂದು ಪ್ರಗತಿ ಪರಿಶೀಲನಾ ಸಭೆ ನಡೆಸಿ ಅಧಿಕಾರಿಗಳಿಗೆ ಹಲವು ಸಲಹೆ ಸೂಚನೆಗಳನ್ನು ನೀಡಿದರು.
ಶಾಸಕರ ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ ಜಿಲ್ಲೆಯಲ್ಲಿ ಉಂಟಾಗಿರುವ ಕೃಷಿ, ತೋಟಗಾರಿಕೆ ಬೆಳೆಹಾನಿ, ಮನೆಹಾನಿ, ರಸ್ತೆ ಸೇತುವೆ, ಕೆರೆಗಳ ಹಾನಿ ಮತ್ತು ಪರಿಹಾರ ಕ್ರಮಗಳ ಕುರಿತು ಸುದೀರ್ಘವಾಗಿ ಚರ್ಚೆ ನಡೆಸಿ ಹಲವು ನಿರ್ದೇಶನಗಳನ್ನು ನೀಡಲಾಯಿತು.
ಜಿಲ್ಲಾ ಉಸ್ತುವಾರಿ ಸಚಿವರು ಮಾತನಾಡಿ ಅಧಿಕಾರಿ ಸಿಬ್ಬಂದಿಗಳು ಸಮಸ್ಯೆ ಉಂಟಾಗಿರುವ ಸ್ಥಳಗಳಿಗೆ ತಕ್ಷಣ ತೆರಳಿ ಜನರ ಕಷ್ಟಗಳಿಗೆ ಸ್ಪಂದಿಸಿ ಪರಿಹಾರ ಒದಗುಸಬೇಕು, ಯಾರೂ ಕೂಡ ಸಂಕಷ್ಟದಲ್ಲಿ ಇರುವ ಜನರಿಂದ ಹಣಕ್ಕೆ ಬೇಡಿಕೆ ಇಡಬಾರದು. ದಾಖಲಾತಿಗಳು ಇರದ ನೈಜ ಕಡುಬಡವರಿಗೆ ಸೂಕ್ತ ದಾಖಲಾತಿ ಹೊಂದಿಸಲು ನೆರವಾಗಬೇಕು ಎಂದು ಸೂಚನೆ ನೀಡಿದರು.
ಕಂದಾಯ ಇಲಾಖೆ ಅಧಿಕಾರಿಗಳು 48 ಗಂಟೆಗಳ ಒಳಗೆ ಬಿದ್ದಿರುವ ಮನೆ ಗುರುತಿಸಿ ಆನ್ ಲೈನ್ ನಲ್ಲಿ ಆಫ್ ಲೋಡ್ ಮಾಡಿ ದಾಖಲೆ ಪಡೆದು, ನೀಡಿ ನೈಜ ಬಡವರಿಗೆ ಅನ್ಯಾಯವಾಗದಂತೆ ಕ್ರಮವಹಿಸಿ ಎಂದು ಗೋಪಾಲಯ್ಯ ಸೂಚಿಸಿದರು.
ತುರ್ತು ಅಗತ್ಯ ಇರುವ ಕಾಮಗಾರಿಗಳನ್ನು ಪಟ್ಟಿಮಾಡಿ ತಕ್ಷಣ ಕ್ರೀಯಾ ಯೋಜನೆ ಸಿದ್ದಪಡಿಸಿ ಅನುಮೋದನೆ ಪಡೆದು ಕೆಲಸ ಮಾಡಬೇಕು. ಸಾರ್ವಜನಿಕ ರಿಗೆ ತೊಂದರೆಯಾಗದAತೆ ತಾತ್ಕಾಲಿಕ ವಾದರೂ ರಸ್ತೆ ದುರಸ್ತಿ ಮಾಡಬೇಕು.ಅಪಾಯಕಾರಿ ಕೆರೆಗಳನ್ನು ಗುರುತಿಸಿ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದರು.
ಮಳೆ ಹಾನಿ ಪರಿಹಾರ ಕ್ರಮಗಳಿಗೆ ಅನುದಾನದ ಕೊರತೆ ಇಲ್ಲ ನಷ್ಟದ ನಿಖರ ವರದಿ ನೀಡಿ ಶೀಘ್ರದಲ್ಲೇ ಇನ್ನಷ್ಟು ಹಣ ಬಿಡುಗಡೆ ಯಾಗಲಿದೆ ಎಂದು ಸಚಿವರಾದ ಕೆ.ಗೋಪಾಲಯ್ಯ ಹೇಳಿದರು 
ಶಾಸಕರಾದ ಹೆಚ್.ಡಿ ರೇವಣ್ಣ, ಹೆಚ್ ಕೆ ಕುಮಾರಸ್ವಾಮಿ, ಎ.ಟಿ ರಾಮಸ್ವಾಮಿ, ಸಿ.ಎನ್ ಬಾಲಕೃಷ್ಣ, ಲಿಂಗೇಶ್ ಅವರು ತಮ್ಮ ಕ್ಷೇತ್ರ ಹಾಗೂ ಜಿಲ್ಲೆಯಲ್ಲಿ ಈ ಬಾರಿ ಮಳೆ ಉಂಟುಮಾಡಿರುವ ಹಾನಿ, ಜನ ಜೀವನದ ಮೇಲಾಗಿರುವ ಪರಿಣಾಮ, ತುರ್ತು ಪರಿಹಾರದ ಅಗತ್ಯ ಗಳ ಬಗ್ಗೆ ಸಚಿವರ ಗಮನ ಸೆಳೆದರು.
ಮಳೆಯಿಂದ ಶಾಲಾ ಕಾಲೇಜು, ಅಂಗನವಾಡಿ ಕಟ್ಟಡ ಗಳ ಹಾನಿಗೆ ಅನುದಾನ ಬಿಡುಗಡೆಯಾಗಿದೆ. ಮನೆ ಹಾನಿಗೂ ಪರಿಹಾರ ಒದಗಿಸಲಾಗುತ್ತಿದೆ ಆದರೆ ರಸ್ತೆಗಳು ಸಂಪೂರ್ಣ ಹದಗೆಟ್ಟಿದ್ದು, ಅಪಘಾತಗಳು ಹೆಚ್ಚುತ್ತಿವೆ. ಅವುಗಳನ್ನ ಸಂಚಾರ ಯೋಗ್ಯವನ್ನಾಗಿ ಮಾಡಲು ಅನುದಾನ ಒದಗಿಸಿ, ಅಪಾಯಕಾರಿಯಾಗಿರು ಕೆರೆಗಳ ದುರಸ್ತಿ, ಸಂರಕ್ಷಣೆಗೆ ಕ್ರಮವಹಸಿ ಎಂದು ಶಾಸಕರು ಮನವಿ ಮಾಡಿದರು. 
 ಮಳೆ ಮುಂದುವರೆದಿರುವ ಹಿನ್ನಲೆಯಲ್ಲಿ ಮನೆ ಹಾನಿ ಸಮೀಕ್ಷೆ ಹಾಗೂ ಗಣಕೀಕೃತ ಅವಧಿ ವಿಸ್ತರಣೆ ಮಾಡಬೇಕು. ದಾಖಲೆ ಇಲ್ಲದ ನೈಜ ಬಡವರಿಗೆ ಸ್ಥಳ ಮಹಜರು ಮೂಲಕ ಪರಿಹಾರ ನೀಡಬೇಕು ಎಂದು ಶಾಸಕರಾದ ಹೆಚ್ ಡಿ ರೇವಣ್ಣ,ಹೆಚ್.ಕೆ ಕುಮಾರಸ್ವಾಮಿ, ಎ.ಟಿ ರಾಮಸ್ವಾಮಿ, ಸಿ.ಎನ್ ಬಾಲಕೃಷ್ಣ, ಲಿಂಗೇಶ್ ಅವರು ಮನವಿ ಮಾಡಿದರು.
ಕೃಷಿ ಹಾಗೂ ತೋಟಗಾರಿಕೆ ಇಲಾಖೆಯಲ್ಲಿ ಅಧಿಕಾರಿ ಸಿಬ್ಬಂದಿ ಕೊರತೆ ಇದೆ ಹಾಗಾಗಿ ನಿಖರವಾಗಿ ಬೆಳೆ ಹಾನಿ ಸಮೀಕ್ಷೆ ಮಾಡುವುದು ಕಷ್ಟ. ವಿಜ್ಞಾನ ಪದವೀಧರರನ್ನು ತಾತ್ಕಾಲಿಕ ಸೇವೆಗೆ ಬಳಸಿ ನಿರ್ದಿಷ್ಟ ವಾಗಿ ನಷ್ಟ ಅಂದಾಜಿಸಿ ಎಂದು ಹೆಚ್.ಡಿ ರೇವಣ್ಣ ಕೋರಿದರು.
ಶಾಸಕರಾದ ಹೆಚ್ ಕೆ ಕುಮಾರಸ್ವಾಮಿ ಹಾಗೂ ಲಿಂಗೇಶ್ ಅವರು ಮಲೆನಾಡು ಭಾಗದಲ್ಲಿ ಅಗಿರುವ ಮಳೆ ಹಾನಿ ಕಾಪಿ, ಮೆಣಸು, ಹಾಗೂ ಇತರ ಬೆಳೆಗಳ ಹಾನಿ ಮತ್ತು ಎತ್ತಿನ ಹೊಳೆ ಯೋಜನೆ ಅನುದಾನ ಸಮಸ್ಯೆ ಬಗ್ಗೆ ಸಚಿವರ ಗಮನ ಸೆಳೆದು ಎಲ್ಲಾ ಹೋಬಳಿಗಳಿಗೂ ಪರಿಹಾರ ದೊರೆಯುವಂತೆ ಅಧಿಕಾರಿಗಳು ವರದಿ ನೀಡಬೇಕು ಎಂದರು. 
ಶಾಸಕರಾದ ಎ.ಟಿ ರಾಮಸ್ವಾಮಿ ಹಾಗೂ ಸಿ.ಎನ್ ಬಾಲಕೃಷ್ಣ ಅವರು ಈ ಬಾರಿ ಬಯಲು ಸೀಮೆಯ ಜನ ಎದುರಿಸುತ್ತಿರುವ ಸಮಸ್ಯೆಗಳು ಕೆರೆಗಳು ಒಡೆದು ಆಗುತ್ತಿರುವ ನಷ್ಟಗಳ ಬಗ್ಗೆ ವಿವರಿಸಿ ಆದಷ್ಟು ಹೆಚ್ಚಿನ ಹಣವನ್ನು ನೀಡುವುದರ ಮೂಲಕ ಸಕಾಲಕ್ಕೆ ಪರಿಹಾರ ಒದಗಿಸಿ ಎಂದರು.
ಜಿಲ್ಲಾಧಿಕಾರಿ ಎಂ.ಎಸ್ ಅರ್ಚನ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕಾಂತರಾಜ್ ಅವರು ಜಿಲ್ಲೆಯಲ್ಲಿ ನ ಮಳೆಹಾನಿ, ಬೆಳೆ ಹಾನಿ ಈ ವರಗೆ ನೀಡಿರುವ ಅನುದಾನ ಪರಿಹಾರ ಕ್ರಮಗಳ ಬಗ್ಗೆ ವಿವರಿಸಿದರು.
ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಸೇರಿದಂತೆ ವಿವಿಧ ಇಲಾಖಾ ಅಧಿಕಾರಿಗಳು ಹಾಜರಿದ್ದರು.

Post a Comment

0 Comments