ಸಕಲೇಶಪುರ: ಕೋವಿಡ್–19 ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡುವಂತೆ ತಾಲ್ಲೂಕು ಆಡಳಿತ ಸಾರ್ವಜನಿಕರಿಗೆ ಮನವಿ ಮಾಡಿದರು.
ಪಟ್ಟಣದ ವಿವಿಧ ಬಡಾವಣೆಗಳಿಗೆ ತಹಶೀಲ್ದಾರ್ ಎಚ್.ಬಿ. ಜೈಕುಮಾರ್ ಹಾಗೂ ಉಪವಿಭಾಗಾಧಿಕಾರಿ ದಢೀರ್ ಭೇಟಿ ನೀಡಿದರು. ಲಾಕ್‌ಡೌನ್ ನಿಯಮ ಉಲ್ಲಂಘಿಸಿ ಅಂಗಡಿ ಮುಂಗಟ್ಟುಗಳನ್ನು ತೆರೆದು ವ್ಯಾಪಾರ ವಹಿವಾಟು ನಡೆಸುತ್ತಿದ್ದ ಕೆಲವರಿಗೆ ಪೊಲೀಸರು ಲಾಠಿ ರುಚಿ ತೋರಿಸಿದರು.
ಸಾರ್ವಜನಿಕರು ಮೂಲಕ ಸೋಂಕು ವ್ಯಾಪಕವಾಗಿ ಹರಡುವುದನ್ನು ತಡೆಗಟ್ಟಲು ಸರ್ಕಾರದೊಂದಿಗೆ ಸಹಕರಿಸಬೇಕು ಎಂದು ಉಪವಿಭಾಗಾಧಿಕಾರಿ ಎಂ.ಗಿರೀಶ್ ನಂದನ್ ಹೇಳಿದರು.
‘ಕೋವಿಡ್–19 ಎರಡನೇ ಅಲೆ ತೀವ್ರ ಸ್ವರೂಪ ತಳೆದಿದ್ದು, ನಿತ್ಯ ನೂರಾರು ಮಂದಿ ಜೀವ ಕಳೆದುಕೊಳ್ಳುತ್ತಿದ್ದರೂ ಸಹ ಸಮಸ್ಯೆಯ ಗಂಭೀರತೆ ಅರಿಯದೆ ಬೇಕಾಬಿಟ್ಟಿ ವರ್ತನೆ ಸರಿಯಲ್ಲ. ಇದೇ ಕೊನೆ ಎಚ್ಚರಿಕೆ, ಪುನಃ ಕಾನೂನು ಉಲ್ಲಂಘಿಸಿದರೆ ಮೊಖದ್ದಮೆ ದಾಖಲು ಮಾಡಲಾಗುವುದು’ ಎಂದು ಗಿರೀಶ್ ನಂದನ್ ಎಚ್ಚರಿಕೆ ನೀಡಿದರು.
ಸಕಲೇಶಪುರ ಹಾಗೂ ಅಲೂರು ತಾಲ್ಲೂಕುಗಳಲ್ಲಿ ಬಹುತೇಕ ಎಲ್ಲರೂ ಮಾಸ್ಕ್ ಧರಿಸುತ್ತಿದ್ದಾರೆ. ಸೋಂಕಿತರ ಸಂಖ್ಯೆ ಹಾಗೂ ಸಾವಿನ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಸಾರ್ವಜನಿಕರಲ್ಲಿ ಆತಂಕ ಇದೆ. ಹೀಗಾಗಿ ಸ್ವಯಂ ಪ್ರೇರಿತರಾಗಿ ಮಾಸ್ಕ್ ಹಾಕುತ್ತಿರುವುದು ಕಂಡು ಬಂದಿದೆ. ಆದರೂ ಬೆರಳೆಣಿಕೆ ಮಂದಿ ಕಾನೂನು ಉಲ್ಲಂಘನೆ ಮಾಡುತ್ತಿದ್ದು, ಅಂತವರಿಗೆ ಈಗಾಗಲೆ ಎಚ್ಚರಿಕೆ ನೀಡಲಾಗಿದೆ. ನಿಯಮ ಉಲ್ಲಂಘನೆ ಮಾಡಿದರೆ ಪ್ರಕರಣ ದಾಖಲು ಹಾಗೂ ದಂಡ ವಿಧಿಸಲಾಗುವುದು ಎಂದರು.
ಜಿಲ್ಲಾಧಿಕಾರಿಗಳ ಆದೇಶದಂತೆ ಶುಕ್ರವಾರ ರಾತ್ರಿ 9 ರಿಂದ ಸೋಮವಾರ ಬೆಳಿಗ್ಗೆ 6 ರ ವರೆಗೆ ಸಂಪೂರ್ಣ ಲಾಕ್‌ಡೌನ್ ಇದೆ. ಶನಿವಾರ ಹಾಗೂ ಭಾನುವಾರ ಬೆಳಿಗ್ಗೆ 6ರಿಂದ ಬೆಳಿಗ್ಗೆ 10ರ ವರೆಗೆ ಹಾಲು, ಹಣ್ಣು, ತರಕಾರಿ, ದಿನಸಿ, ಮೀನು, ಮಾಂಸ ಮೊದಲಾದ ಅಗತ್ಯ ಆಹಾರ ವಸ್ತುಗಳ ಮಾರಾಟಕ್ಕೆ ಅವಕಾಶ ಇದೆ. 10 ಗಂಟೆ ನಂತರ ಔಷಧಿ ಅಂಗಡಿಗಳು, ಆಸ್ಪತ್ರೆಗಳನ್ನು ಹೊರತುಪಡಿಸಿ ಸಂಪೂರ್ಣ ಬಂದ್ ಮಾಡಬೇಕು. ದೂರದ ಊರುಗಳಿಗೆ ಪ್ರಯಾಣ ಮಾಡುವ ಪ್ರಯಾಣಿಕರಿಗೆ ಅನುಮತಿ ಇದೆ. ಸ್ಥಳೀಯವಾಗಿ ಕಾರಣ ಇಲ್ಲದೆ ಅಡ್ಡಾಡುವುದಕ್ಕೆ ಅವಕಾಶ ಇಲ್ಲ ಎಂದರು.
ಹೆದ್ದಾರಿ ಪಕ್ಕದಲ್ಲಿ ವಾಹನಗಳನ್ನು ರಿಪೇರಿ ಮಾಡುವ, ಗಾಳಿ ಹಾಕುವ ವರ್ಕ್‌ಶಾಪ್‌ಗಳನ್ನು ಹೊರತುಪಡಿಸಿ ಬೇರೆ ಎಲ್ಲಾ ವರ್ಕ್‌ಶಾಪ್‌ಗಳನ್ನು ಮುಚ್ಚಬೇಕು. ಕೃಷಿ ಚಟುವಟಿಕೆಗಳ ಸಲಕರಣೆ, ಗೊಬ್ಬರ ಮಾರಾಟ ಮಾಡುವುದಕ್ಕೆ ಅವಕಾಶ ಇದ್ದು, ಅಂಗಡಿ ಬಾಗಿಲು ತೆಗೆದು ಜನರನ್ನು ಗುಂಪು ಗೂಡಿಸಲು ಅವಕಾಶ ಇಲ್ಲ ಎಂದು ತಹಶೀಲ್ದಾರ್ ಎಚ್.ಬಿ. ಜೈಕುಮಾರ್ ಹೇಳಿದರು.
0 Comments