ರಾಷ್ಟ್ರೀಯ ಹೆದ್ದಾರಿ 75ರ ಬೈರಾಪುರ ಗ್ರಾಮದ ಬಳಿ ಕಾರೊಂದು ನಿಯಂತ್ರಣ ತಪ್ಪಿ ಪಲ್ಟಿ


*ವರದಿ ಸತೀಶ್ ಚಿಕ್ಕಕಣಗಾಲ್*

ಆಲೂರು: ರಾಷ್ಟ್ರೀಯಯ ಹೆದ್ದಾರಿ ೭೫ರ ಬೈರಾಪುರ ಸೇತುವೆ ಬಳಿ ಮಂಗಳವಾರ ಕಾರು ಪಲ್ಟಿಯಾಗಿ ಚಾಲಕ ಗಂಭೀರ ಗಾಯಗೊಂಡಿದ್ದು ಆಲೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.

ಸಕಲೇಶಪುರ ತಾಲೂಕು ಬ್ಯಾಕರವಳ್ಳಿ ಗ್ರಾಮದ ಮಂಜುನಾಥ್ (೪೫) ಗಾಯಾಳು. ಸಂಜೆ ೪ರ ವೇಳೆ ಗ್ರಾಮದಿಂದ ಹಾಸನಕ್ಕೆ ಬರುತ್ತಿದ್ದರು. ಬೈರಾಪುರದ ಬಳಿ ರಾಷ್ಟ್ರೀಯ ಹೆದ್ದಾರಿ ವಿಸ್ತರಣೆ ಕಾಮಗಾರಿ ನಡೆಯುತ್ತಿದ್ದು ಗ್ರಾಮದಲ್ಲಿ ಸೇತುವೆ ನಿರ್ಮಿಸಲಾಗುತ್ತಿದೆ. ಆದರೆ ರಸ್ತೆಯ ಎರಡೂ ಬದಿಗೆ ಯಾವುದೇ ಸೂಚನಾ ಫಲಕ ಅಳವಡಿಸದೆ ಇರುವುದರಿಂದ ವಾಹನ ಚಾಲಕರು ವೇಗವಾಗಿ ಬರುವುದರಿಂದ ಅಪಘಾತ ಸಂಭವಿಸುತ್ತಿವೆ.
ಕಳೆದ ೫ ವರ್ಷದಿಂದ ಕೆಲಸ ನಡೆಯುತ್ತಿದ್ದು ನಿರೀಕ್ಷಿತ ವೇಗ ಪಡೆದಿಲ್ಲ. ರಸ್ತೆಯ ಎರಡೂ ಬದಿಗೆ ಮಣ್ಣಿನ ರಾಶಿ ಬಿದ್ದಿರುವುದರಿಂದ ಪಾದಚಾರಿಗಳ ಸಂಚಾರಕ್ಕೂ ಭಾರಿ ತೊಂದರೆಯಾಗಿದೆ. ಕೆಲಸ ನಡೆಯುತ್ತಿರುವ ಸ್ಥಳದ ಹತ್ತಿರ ವಾಹನ ಓಡಾಟಕ್ಕೆ ಕಿರಿದಾದ ದಾರಿ ನಿರ್ಮಿಸಿಕೊಡಲಾಗಿದ್ದು ಅದು ಅಪಾಯಕ್ಕೆ ಆಹ್ವಾನ ನೀಡುತ್ತಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಆದಷ್ಟು ಬೇಗ ಕೆಲಸ ಪೂರ್ಣಗೊಳಿಸಬೇಕು. ಇಲ್ಲವಾದರೆ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಕರವೇ ತಾಲೂಕು ಉಪಾಧ್ಯಕ್ಷ ರಘು ಪಾಳ್ಯ ಎಚ್ಚರಿಸಿದ್ದಾರೆ.

Post a Comment

0 Comments