ಆಧಿಕಾರಿಗಳು,ಜನಪ್ರತಿನಿಧಿಗಳ ನಿರ್ಲಕ್ಷ್ಯ ದಿಂದ ಸಾವಿನ ಹೆದ್ದಾರಿಯಾದ NH-75


ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಸ್ಥಳೀಯ ಜನಪ್ರತಿನಿಧಿಗಳು, ಹಾಗೂ ಗುತ್ತಿಗೆದಾರರ ಬೇಜವಬ್ಧಾರಿಯಿಂದ ರಾಜ್ಯ ರಾಜಧಾನಿ ಬೆಂಗಳೂರಿನಿಂದ ಕಡಲ ನಗರಿ ಮಂಗಳೂರಿಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ ಹಾಸನ-ಸಕಲೇಶಪುರ -ಮಾರನಹಳ್ಳಿ ವರೆಗಿನ ಸಂಚಾರ ಅಕ್ಷರಶಃ ಸಾವಿನ ಹೆದ್ದಾರಿಯಾಗಿ ಜನರ ಜೀವ ಹಿಂಡುತ್ತಿದೆ. 

ಚತುಷ್ಪತ ರಸ್ತೆ ನಿರ್ಮಾಣಕ್ಕಾಗಿ ಕಳೆದ ಮೂರು ವರ್ಷಗಳ ಹಿಂದೆಯೇ ಹಾಸನ ದಿಂದ ಮಾರನಹಳ್ಳಿ ವರೆಗೆ ರಸ್ತೆಯನ್ನ ಅಲ್ಲಲ್ಲಿ ಅಗೆದು ವಿರೂಪಗೊಳಿಸಲಾಗಿದೆ. ಈ ರಸ್ತೆಯುದ್ದಕ್ಕೂ ಸಾವಿರಾರು ಮಂಡಿಯುದ್ದದ ಗುಂಡಿಗಳು ಬಿದ್ದು ವಾಹನ ಸಂಚಾರವಷ್ಟೇ ಅಲ್ಲ ಪಾದಚಾರಿಗಳೂ ಸಹ ನೆಡೆದಾಡದಂತಹ ಹೀನ ಸ್ಥಿತಿಗೆ ತಲುಪಿದೆ. ಗುತ್ತಿಗೆ ತೆಗೆದುಕೊಂಡ ಖಾಸಗಿ ಕಂಪನಿ ಕಾಮಗಾರಿಯನ್ನ ಸರಿಯಾಗಿ ನಿರ್ವಹಿಸದೆ ಅರ್ಧಕ್ಕೆ ಕೆಲಸ ನಿಲ್ಲಿಸಿದ್ದು ರಾಷ್ಟ್ರೀಯ ಹೆದ್ಧಾರಿ ಪ್ರಾಧಿಕಾರ ಕೂಡ ಯಾವುದೇ ಕ್ರಮ ತೆಗೆದುಕೊಳ್ಳದೆ ಕಣ್ಮುಚ್ಚಿ ಕುಳಿತಿದೆ. 

ರಸ್ತೆಯುದ್ದಕ್ಕೂ ಹತ್ತಾರು ವಾಹನಗಳು ಕೆಟ್ಟು ನಿಲ್ಲುವುದಲ್ಲದೆ, ಅಪಘಾತಗಳು ಸಹ ನೆಡೆಯುತ್ತಿದ್ದು ಈವರೆಗೂ ಹಲವು ಸಾವು ನೋವುಗಳಾಗಿವೆ. ಇಷ್ಟಿದ್ದರೂ ಸಹ ಸ್ಥಳೀಯ ಸಂಸದರಾಗಲಿ, ಶಾಸಕರಾಗಲಿ ಈ ರಸ್ತೆ ದುರಸ್ಥಿ ಮಾಡಿಸುವ ಬಗ್ಗೆ ತಲೆ ಕೆಡಿಸಿಕೊಳ್ಳದಿರುವುದು ವಿಪರ್ಯಾಸವೇ ಸರಿ. ಚುನಾವಣೆ ಸಮಯದಲ್ಲಿ ಮಾತ್ರ ರಾಜಕಾರಣಿಗಳಿಗೆ ಅಭಿವೃದ್ಧಿ ನೆನಪಾಗುತ್ತದೆ. ಗೆದ್ದ ನಂತರ ಅದರ ಬಗ್ಗೆ ಗಮನವೇ ಇರುವುದಿಲ್ಲ. ಇನ್ನೆಷ್ಟು ಬಲಿಗಾಗಿ ಈ ರಾಜಕಾರಣಿಗಳು, ಅಧಿಕಾರಿಗಳು, ಗುತ್ತಿಗೆದಾರರು ಕಾಯುತ್ತಿದ್ದಾರೋ ಗೊತ್ತಿಲ್ಲ. ಜನ ರಾಜ್ಯದ ಪ್ರಮುಖ ರಾಷ್ಟ್ರೀಯ ಹೆದ್ದಾರಿಯಲ್ಲಿ ಜೀವ ಕೈಯಲ್ಲಿ ಹಿಡಿದು ಸಂಚರಿಸಬೇಕಾದ ದುಸ್ಥಿತಿ ಬಂದಿರುವುದು ನಿಜಕ್ಕೂ ದುರಂತದ ಸಂಗತಿಯಾಗಿದೆ.

Post a Comment

0 Comments