ಸಾರ್ವಜನಿಕರು ಹೋಂ ಐಸೋಲೇಷನ್‍ಗೆ ಸಹಕರಿಸಿ: ನವೀನ್ ರಾಜ್ ಸಿಂಗ್

ಸಾರ್ವಜನಿಕರು ಹೋಂ ಐಸೋಲೇಷನ್‍ಗೆ ಸಹಕರಿಸಿ: ನವೀನ್ ರಾಜ್ ಸಿಂಗ್
ಸರ್ಕಾರದ ನಿರ್ದೇಶನದಂತೆ ಕೋವಿಡ್ ಸೋಂಕಿತರನ್ನು ಹೋಂ ಐಸೋಲೇಷನ್ ಮಾಡಿ ಸರ್ಕಾರದ ಮಾರ್ಗಸೂಚಿಯಂತೆ ಸೋಂಕಿತರ ಮೇಲೆ ನಿಗಾವಹಿಸಲಾಗುವುದು ಸಾರ್ವಜನಿಕರು ಭಯಭೀತರಾಗದೆ ಜಿಲ್ಲಾಡಳಿತದೊಂದಿಗೆ ಸಹಕರಿಸುವಂತೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಹಾಗೂ ಮೈಸೂರು ಮಿನರಲ್ಸ್‍ನ ವ್ಯವಸ್ಥಾಪಕ ನಿರ್ದೇಶಕರಾದ ನವೀನ್ ರಾಜ್ ಸಿಂಗ್ ಅವರು ತಿಳಿಸಿದ್ದಾರೆ.
 ಜಿಲ್ಲಾಧಿಕಾರಿಯವರ ಕಚೇರಿಯಲ್ಲಿಂದು ಕೋವಿಡ್-19 ಕುರಿತು ಸಭೆ ನಡೆಸಿ ಮಾತನಾಡಿದ ಅವರು ಕೋವಿಡ್ ಸೋಂಕಿತರ ಮನೆಯಲ್ಲಿ ಪ್ರತ್ಯೇಕ ಶೌಚಾಲಯ ಹಾಗೂ ಸೂಕ್ತ ವ್ಯವಸ್ಥೆಗಳಿದ್ದು ಹೋಂ ಐಸೋಲೇಷನ್‍ನಲ್ಲಿರಲು ಇಚ್ಚಿಸಿದರೆ ಅವಕಾಶ ನೀಡಿ ಅವರ ಚಲನವಲನಗಳನ್ನು 24/7 ವೀಕ್ಷಿಸಲು ವೈದ್ಯಕೀಯ ಸಿಬ್ಬಂದಿ ನೇಮಿಸಿ ನಿಗಾವಹಿಸಿ ಎಂದರು.
 ಹೋಂ ಐಸೋಲೇಷನ್‍ನಲ್ಲಿರುವ ಸೋಂಕಿತರು ಥರ್ಮೋ ಮೀಟರ್ ಹಾಗೂ ಪಲ್ಸ್ ಆಕ್ಸಿ ಮೀಟರ್ ಕಡ್ಡಾಯವಾಗಿ ಇಟ್ಟುಕೊಳ್ಳವಂತೆ ಸೂಚನೆ ನೀಡಿ ಹಾಗೂ ಸೋಂಕಿತರು ತುರ್ತು ಸಂದರ್ಭದಲ್ಲಿ ಮಾಹಿತಿ ನೀಡಲು ಪ್ರಾಥಮಿಕ ಆರೋಗ್ಯ ಕೇಂದ್ರದ ದೂರವಾಣಿ ಸಂಖ್ಯೆ ಹಾಗೂ ವೈದ್ಯರ ದೂರವಾಣಿ ಸಂಖ್ಯೆ ಮತ್ತು ಕೇಂದ್ರ ನಿಯಂತ್ರಣ ಘಟಕದ ದೂರವಾಣಿ ಸಂಖ್ಯೆ ನೀಡುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಯವರಿಗೆ ಸೂಚಿಸಿದರು.
 ಕೋವಿಡ್ ಆಸ್ಪತ್ರೆಯಲ್ಲಿರುವ ಸೋಂಕಿತರ ಸಂಪರ್ಕಿತರು ಹಾಗೂ ಕೊರೋನಾ ಗುಣಲಕ್ಷಣಗಳಿಲ್ಲದ ಸೋಂಕಿತರನ್ನು ಕೋವಿಡ್ ಕೇರ್ ಕೇಂದ್ರಕ್ಕೆ ಶೀಘ್ರವಾಗಿ ವರ್ಗಾಯಿಸಿ ವೈದ್ಯರ ವ್ಯವಸ್ಥೆ ಮಾಡಿ ಮತ್ತು ಪೂರಕ ವ್ಯವಸ್ಥೆ ಕಲ್ಪಿಸಿ ಎಂದು ಹಿಮ್ಸ್ ನಿರ್ದೇಶಕರು ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಅವರು ಸೂಚಿಸಿದರು.
 ಕೋವಿಡ್ ಕೇರ್ ಕೇಂದ್ರಗಳಿಗೆ 24 ಗಂಟೆ ಕಾರ್ಯ ನಿರ್ವಹಿಸುವಂತೆ 2 ಆಂಬ್ಯುಲೆನ್ಸ್ ವ್ಯವಸ್ಥೆ ಮಾಡಿ ತುರ್ತು ಪರಿಸ್ಥಿತಿಯಲ್ಲಿರುವ ರೋಗಿಗಳನ್ನು ತಕ್ಷಣ ಕೋವಿಡ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿ ಎಂದರಲ್ಲದೇ ಪ್ರತಿ ಆಂಬ್ಯುಲೆನ್ಸ್‍ಗಳಿಗೂ ಆಮ್ಲಜನಕ ಮತ್ತು ವೆಂಟಿಲೇಟರ್‍ಗಳ ವ್ಯವಸ್ಥೆ ಮಾಡಿ ಎಂದು ವೈದ್ಯಾಧಿಕಾರಿಗಳಿಗೆ ನವೀನ್ ರಾಜ್ ಸಿಂಗ್ ಅವರು ನಿರ್ದೇಶಿಸಿದರು.
 ಕೋವಿಡ್ ಆಸ್ಪತ್ರೆಯಲ್ಲಿ ಗಂಟಲ ದ್ರವ ಮಾದರಿ ಸಂಗ್ರಹಿಸಿದ ತಕ್ಷಣ ರೋಗಿಯ ಪೂರ್ಣ ವಿಳಾಸ ಹಾಗೂ ದೂರವಾಣಿ ಸಂಖ್ಯೆನ್ನು ಪಡೆದು ಅಲ್ಲಿಯೇ ಒಮ್ಮೆ ಪರೀಕ್ಷಿಸಿಕೊಳ್ಳುವಂತೆ ಸೂಚನೆ ನೀಡಿ ಎಂದರಲ್ಲದೆ, ಯಾವುದೇ ವ್ಯತ್ಯಾಸ ಕಂಡುಬಂದರೂ ಅವರನ್ನು ಪರೀಕ್ಷಿಸಿದ ವೈದ್ಯರು ಮತ್ತು ಪ್ರಯೋಗಾಲಯ ತಂತ್ರಜ್ಞರೇ ಜವಬ್ದಾರರು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಅವರು ತಿಳಿಸಿದರು.
 ಸೋಂಕಿತರಿಗೆ ಸಂಬಂಧಿಸಿದಂತೆ ಬಾಕಿ ಇರುವ ಅಂಕಿ ಸಂಖ್ಯೆ ವರದಿಯನ್ನು ಶೀಘ್ರವಾಗಿ ಪೂರ್ಣಳಿಸಿ ಎಂದರಲ್ಲದೆ, ಅಂಕಿ ಸಂಖ್ಯೆ ವರದಿ ಸಿಬ್ಬಂಧಿ, ಐ.ಸಿ.ಎಮ್.ಆರ್. ಪೋರ್ಟಲ್ ಹಾಗೂ ರ್ಯಾಪಿಡ್ ಆಂಟಿಜೆನ್ ಕಿಟ್‍ಗಳ ವ್ಯವಸ್ಥೆ ಬಗ್ಗೆ ನಿಗಾವಹಿಸುವಂತೆ ಜಿಲ್ಲಾ ಸರ್ವೇಕ್ಷಣಾಧಿಕಾರಿಗೆ  ನವೀನ್ ರಾಜ್ ಸಿಂಗ್ ಅವರು ನೀರ್ದೇಶಿಸಿದರು.
 ಜಿಲ್ಲೆಯಲ್ಲಿನ ವಾರ್ಡ್ ಮಟ್ಟದ ಮತ್ತು ಬೂತ್ ಮಟ್ಟದ ಅಧಿಕಾರಿಗಳು ಹಾಗೂ ಗ್ರಾಮೀಣ ಭಾಗದಲ್ಲಿರುವ ಟಾಸ್ಕ್ ಫೋರ್ಸ್ ಸಮಿತಿಗಳ ಸದಸ್ಯರಿಂದ ಪ್ರಾಥಮಿಕ ಹಂತದ ಸಂಪರ್ಕಿತರನ್ನು ಪತ್ತೆ ಹಚ್ಚುವ ಕಾರ್ಯ ಮಾಡಿ ಎಂದು ಜಿಲ್ಲಾದಿಕಾರಿಗಳಿಗೆ ಅವರು ಸೂಚಿಸಿದರು.
 ಹೋಂ ಐಸೋಲೇಷನ್ ನಿಯಮಗಳನ್ನು ಉಲ್ಲಂಘಿಸಿ ಅನಾವಶ್ಯಕವಾಗಿ ಓಡಾಡುತ್ತಿರುವವರ ವಿರುದ್ಧ ಎಫ್.ಐ.ಆರ್. ದಾಖಲಸಿ ಹಾಗೂ ಅನಾವಶ್ಯಕವಾಗಿ ಓಡಾಡದಂತೆ ಎಚ್ಚರಿಕೆ ನೀಡಿ ಕಟ್ಟುನಿಟ್ಟಿನ ಕ್ರಮ ಜರುಗಿಸಿ ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಅವರು ಜಿಲ್ಲಾಧಿಕಾರಿಯವರಿಗೆ ನಿರ್ದೇಶಿಸಿದರು.
 ಖಾಸಗಿ ಆಸ್ಪತ್ರೆಗಳು ಹಾಗೂ ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿ ಕೋವಿಡ್-19 ಸೊಂಕಿತರಿಗಾಗಿ ಶೇ.50 ರಷ್ಟು ಬೆಡ್‍ಗಳ ವ್ಯವಸ್ಥೆ ಮಾಡಬೇಕು ಎಂದು ಸರ್ಕಾರ ಆದೇಶಹೊರಡಿಸಿದ್ದು, ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ನೀಡಲು ನಿರಾಕರಿಸಿದ ಆಸ್ಪತ್ರೆಗಳ ಪರವಾನಗಿ ರದ್ದುಗೊಳಿಸಿ ದೂರು ದಾಖಲಿಸಿ ಎಂದು ಜಿಲ್ಲಾಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ನವೀನ್ ರಾಜ್ ಸಿಂಗ್ ಅವರು ಸೂಚಿಸಿದರು.
 ಕೋವಿಡ್ ಆಸ್ಪತ್ರೆಯಲ್ಲಿ 50 ಐ.ಸಿ.ಯು ಬೆಡ್‍ಗಳಿರುವುದರಿಂದ ಬೆಡ್ ಸಂಖ್ಯೆಗಳನ್ನು ಹೆಚ್ಚಿಸಿ ಮತ್ತು ವೈದ್ಯಕೀಯ ಸಿಬ್ಬಂದಿಗಳ ಕೊರತೆಯಾಗದಂತೆ ಕ್ರಮವಹಿಸಿ ಎಂದರಲ್ಲದೆ, ಅವಶ್ಯಕವಿರುವ ವೈದ್ಯರು, ನರ್ಸ್ ಹಾಗೂ ಪ್ರಯೋಗಾಲಯ ತಂತ್ರಜ್ಞರನ್ನು ಹೊರಗುತ್ತಿಗೆ ಆಧಾರದ ಮೇಲೆ ನೇಮಿಸಿಕೊಳ್ಳಿ ಎಂದು ಅವರು ಜಿಲ್ಲಾಧಿಕಾರಿಯವರಿಗೆ ಸೂಚಿಸಿದರು.
ಜಿಲ್ಲಾಧಿಕಾರಿ ಆರ್. ಗಿರೀಶ್ ಅವರು ಜಿಲ್ಲೆಯಲ್ಲಿನ ಕೋವಿಡ್-19 ಸ್ಥಿತಿಗತಿ ಮತ್ತು ಕೈಗೊಂಡಿರುವ ಕ್ರಮಗಳು ಹಾಗೂ ಕೃಷಿ ಕಾಲೇಜನ್ನು ಕೋವಿಡ್ ಕೇರ್ ಕೇಂದ್ರವನ್ನಾಗಿ ಪರಿವರ್ತಿಸಲು ವ್ಯವಸ್ಥೆ ಮಾಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ನವೀನ್ ರಾಜ್ ಸಿಂಗ್ ಅವರಿಗೆ ಮಾಹಿತಿ ನೀಡಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ.ಎ. ಪರಮೇಶ್, ಅಪರ ಜಿಲ್ಲಾಧಿಕಾರಿ ಕವಿತ ರಾಜಾರಾಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ|| ಸತೀಶ್, ಉಪ ವಿಭಾಗಾಧಿಕಾರಿ ಡಾ|| ನವೀನ್ ಭಟ್, ಹಿಮ್ಸ್ ನಿರ್ದೇಶಕರಾದ ಡಾ|| ರವಿಕುಮಾರ್, ಜಿಲ್ಲಾ ಶಸ್ತ್ರ ಚಿಕಿತ್ಸಕರಾದ ಡಾ|| ಕೃಷ್ಣ ಮೂರ್ತಿ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಾದ ಬಿ.ಎ. ಜಗದೀಶ್, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ|| ಹಿರಣ್ಣಯ್ಯ ಹಾಗೂ ಮತ್ತಿತರ ಅಧಿಕಾರಿಗಳು ಹಾಜರಿದ್ದರು.

Post a Comment

0 Comments