ಮೂರ್ಕಣ್ಣು ಗುಡ್ಡ"ಎತ್ತಿನ ಹೊಳೆ" ಎಂದರೆ ಸಾಕು ಈಗ ರಾಜ್ಯಕ್ಕೇ ಗೊತ್ತು... ಮಾತ್ರವಲ್ಲ ದೇಶದಲ್ಲೂ ಸುದ್ದಿ ಮಾಡುತ್ತಿರುವ ಹೆಸರು...

ಮೂರ್ಕಣ್ಣು ಗುಡ್ಡ
ಹೀಗಂದರೆ ನಮ್ಮ ತಾಲ್ಲೂಕಿನ, ಹೆಚ್ಚೆಂದರೆ ನಮ್ಮ ಜಿಲ್ಲೆಯ ಹಲವರಿಗೆ ತಿಳಿದಿರುವ ಹೆಸರು... 
"ಎತ್ತಿನ ಹೊಳೆ" ಎಂದರೆ ಸಾಕು ಈಗ ರಾಜ್ಯಕ್ಕೇ ಗೊತ್ತು... ಮಾತ್ರವಲ್ಲ ದೇಶದಲ್ಲೂ ಸುದ್ದಿ ಮಾಡುತ್ತಿರುವ ಹೆಸರು...
ಈ ಎತ್ತಿನ‌ಹೊಳೆ ಎಂದು ಬಿರುದಾಂಕಿತವಾಗಿರುವ ನಮ್ಮ ಯೆತ್ನಳ್ಳ.  ಹುಟ್ಟುವುದು ಇಲ್ಲೇ.
ಯೆತ್ನಳ್ಳದ ಜೊತೆಗೆ ಇನ್ನೆರಡು ಹಳ್ಳಗಳೂ ಇಲ್ಲಿ ಹುಟ್ಟುತ್ತವೆ ಅದು ಚಿಟ್ನಳ್ಳ ಮತ್ತು ಜಪಾವತಿ... ಇವೆರಡು ಪೂರ್ವಾಭಿಮುಖವಾಗಿ ಹೇಮಾವತಿಯನ್ನು ಸೇರಿದರೆ, ಯೆತ್ನಳ್ಳ ಮಾತ್ರ ಪಶ್ಚಿಮ ಮುಖಿ...
ಕೆಂಪೊಳೆಯನ್ನು ಸೇರುವ ತನಕ ಏಳೆಂಟು ಕಿ.ಮೀ ದೂರವಷ್ಟೇ ಇದರ ಹರಿವು...
ಮೂರು ಹಳ್ಳ ಗಳು ಮೂರು ಕಣ್ಣಿನಂತೆ ಹರಿಯುವ. ಈ ಗುಡ್ಡಕ್ಕೆ....ಮೂರ್ಕಣ್ಣು ಗುಡ್ಡ ಎಂಬ ಅನ್ವರ್ಥನಾಮ...

ಈ ನಮ್ಮ ಯೆತ್ನಳ್ಳ ಎತ್ತಿನ ಹೊಳೆ ಎಂಬ ಹೆಸರು ಪಡೆದು ಲೋಕ ವಿಖ್ಯಾತವಾದ ಕಥಾನಕದ ಬಗ್ಗೆ ಹಿಂದೆ ನಾನೇ ಒಂದು ಎತ್ತಿನ ಹೊಳೆಗಿಂತ ಉದ್ದವಾದ ಲೇಖನ ಬರೆದಿರುವುದರಿಂದ ಮತ್ತೆ ಇಲ್ಲಿ ಪ್ರಸ್ಥಾಪಿಸುವುದಿಲ್ಲ.

  ಈಗ ಈ ವರ್ಷದ ವಿದ್ಯಮಾನದ ಬಗ್ಗೆ ಗಮನಿಸೋಣ.ಜುಲೈ ಕೊನೆಯಾಗುತ್ತ ಬಂದರೂ ಈ ಭಾಗದಲ್ಲಿ ಮಳೆ ಕಣ್ಣು ಮುಚ್ಚಾಲೆ ಆಡುತ್ತಿದೆ. ಸರಾಸರಿಯಂತೆ ಇದುವರೆಗೆ ಕನಿಷ್ಡ ಎಪ್ಪತ್ತು ಇಂಚಾದರೂ ಮಳೆಯಾಗಬೇಕಾದ ನಮ್ಮೂರಿಗೆ ಇನ್ನೂ ಕೇವಲ ಮೂವತ್ತೈದು ಇಂಚು ಮಳೆ ಬಿದ್ದಿದೆ. ಇನ್ನೂ ಎರಡು ತಿಂಗಳಲ್ಲಿ ಬರುವ ಸಾಧ್ಯತೆಯೂ ಇದೆ.

ಪ್ರತಿ ವರ್ಷವೂ ಬೇಸಿಗೆಯಲ್ಲಿ ಮೂರ್ಕಣ್ಣು ಗುಡ್ಡಕ್ಕೆ ಬೆಂಕಿ ಬೀಳುವುದು ವಾಡಿಕೆ. ಈ ವರ್ಷ ಸ್ವಲ್ಪ ಮೊದಲೇ ಅಂದರೆ ಜನವರಿಯಲ್ಲಿಯೇ ಬೆಂಕಿ ಬಿದ್ದಿತ್ತು.

ಈಗ ಮಳೆಗಾಲ ಪ್ರಾರಂಭವಾಗಿ ಲೆಕ್ಕಕ್ಕೆ ಎರಡು ತಿಂಗಳಾಯಿತು.  
ನಮ್ಮ ರಂಗಮಂದಿರ ದಿಂದಲೇ ಮೂರ್ಕಣ್ಣು ಗುಡ್ಡ ಕಾಣಿಸುತ್ತದೆ. ಚಿತ್ರ ೧. ಎರಡು ಒಂದೇ ರೀತಿ ಕಾಣುವ ಬೆಟ್ಟಗಳು. ಅದರ ಮಧ್ಯೆ ಹಿನ್ನೆಲೆಯಲ್ಲಿ ಬತ್ತದರಾಶಿಯಂತೆ ಕಾಣುವುದು ಜೇನುಕಲ್ಲು ಗುಡ್ಡ.
ಚಿತ್ರ ೨ ಮತ್ತು ೩ ಮಳೆಗಾಲವಿಡೀ ಮೂರ್ಕಣ್ಣು ಗುಡ್ಡಕ್ಕೆ ಮೋಡ ಮುಸುಕಿದಾಗ ಕಾಣುವ ರೀತಿ.

ಈಗ ಕೆಲವು ದಿನಗಳಿಂದ ಬೆಟ್ಟದಲ್ಲಿ ಮಣ್ಣು ಕುಸಿದಂತೆ ಕೆಂಪಾಗಿ ಕಾಣ ತೊಡಗಿತು. ಇದೇನು ಮಳೆಯೇ ಇಲ್ಲದೆ ಗುಡ್ಡ ಕುಸಿಯಿತೇ ಎಂದು ಗಾಭರಿಯಾಗಿ ನಾವು ಕೆಲವರು ನೋಡಲು ಹೋದೆವು.

ಗುಡ್ಡವೇನೂ ಕುಸಿದಿಲ್ಲ...ನೆಮ್ಮದಿಯಾಯಿತು. ಆದರೆ ಬೇಸಿಗೆಯಲ್ಲಿ ಸುಟ್ಟುಹೋದ ಕಾಡು ಮತ್ತು ಹುಲ್ಲು ಇನ್ನೂ ಚಿಗುರಿಲ್ಲ. ಆ ಜಾಗವೆಲ್ಲ ಕೆಂಪಾಗಿ ಕಾಣುತ್ತಿದೆ. 
ಒಂದು ಅಂದಾಜಿನಂತೆ ಗುಡ್ಡದಲ್ಲಿ ಈ ಸಮಯಕ್ಕೆ ಮಳೆ ನೂರೈವತ್ತು ಇಂಚು ಬಿದ್ದಿರಬೇಕಿತ್ತು. ಆದರೆ ಈಗ ಮೋಡಗಳ ಸುಳಿವೂ ಇಲ್ಲ.
 ಆದರೆ ಈ ವರ್ಷ ಅತ್ಯಂತ ಕಡಿಮೆ ಮಳೆ ಆಗಿದೆ ಎನ್ನುವುದಕ್ಕೆ ಸುಟ್ಟು ಹೋದ ಹುಲ್ಲು ಕೂಡ ಚಿಗುರದಿರುವುದು ಸಾಕ್ಷಿ. ಬೆಟ್ಟದ ಮೇಲಿನ ಕಣಿವೆಗಳ ಕಾಡುಗಳೂ ಹೀಗೆ ಕಾಣಿಸುತ್ತಿವೆ.ಚಿತ್ರ ೪,೫,೬ ನೋಡಿ.

ಈಗ ಇದ್ದಕ್ಕಿದ್ದಂತೆ ಮಳೆ ಜೋರಾದರೆ ಭೂಕುಸಿತ ಉಂಟಾಗಲೂ ಬಹುದು...

ಯೆತ್ನಳ್ಳ...... ಎತ್ತಿನಹೊಳೆ ಆದಾಗಲೇ.....ಅದಕ್ಕೆ ಬೆಂಕಿ ಬಿತ್ತು.....
ಈಗ ಹೊಳೆಯ ಮೂಲಕ್ಕೂ ...ಬೆಂಕಿ.....

Post a Comment

0 Comments